ADVERTISEMENT

ಅಕಾಡೆಮಿಯಿಂದ ಪುರಸ್ಕಾರ, ಗ್ರಂಥಾಲಯದಿಂದ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 19:30 IST
Last Updated 22 ಜನವರಿ 2021, 19:30 IST

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ ಪಡೆದಿದ್ದರೂ ಲೇಖಕ ನರೇಂದ್ರ ರೈ ದೇರ್ಲ ಅವರ ಪುಸ್ತಕವನ್ನು ಗ್ರಂಥಾಲಯ ಇಲಾಖೆ ಆಯ್ಕೆ ಮಾಡದೆ ಕೈಬಿಟ್ಟ ಸುದ್ದಿ (ಪ್ರ.ವಾ., ಜ. 22) ಪ್ರಕಟವಾಗಿದೆ. ಗ್ರಂಥಾಲಯ ಇಲಾಖೆಗೆ ಪ್ರತಿವರ್ಷ ಆರೇಳು ಸಾವಿರ ಪುಸ್ತಕಗಳು ಪರಿಶೀಲನೆಗೆ ಬರುತ್ತಿದ್ದುದರಿಂದ ಈ ಕೃತಿ ಕೈಬಿಟ್ಟು ಹೋಗಿರುವುದು ಆಕಸ್ಮಿಕವೇ ಇರಬಹುದು.

ಹೀಗಾಗದಿರಲು ಒಂದು ಸುಲಭ ಮಾರ್ಗವಿದೆ: ಸರ್ಕಾರಿ ಅನುದಾನಿತ ಅಕಾಡೆಮಿ, ಪ್ರಾಧಿಕಾರ, ಟ್ರಸ್ಟ್‌ಗಳಂಥ ಸಂಘ-ಸಂಸ್ಥೆಗಳಿಂದ ಬಹುಮಾನ ಪಡೆದ ಕೃತಿಯನ್ನು ಗ್ರಂಥಾಲಯ ಇಲಾಖೆ ತಾನಾಗಿ ಮೊದಲೇ ಕಡ್ಡಾಯವಾಗಿ ಖರೀದಿ ಮಾಡಿಬಿಡಬೇಕು. ಪ್ರತಿವರ್ಷ ಅಂಥ ಪುಸ್ತಕಗಳ ಸಂಖ್ಯೆ ಹೆಚ್ಚೆಂದರೆ 35-40 ಇದ್ದೀತು. ಹಾಗೆ ಮಾಡಿದರೆ ಲೇಖಕರು ತಾವಾಗಿ ತಮ್ಮ ಪುಸ್ತಕವನ್ನು ಆಯ್ಕೆ ಮಾಡಿರೆಂದು ಸರ್ಕಾರಿ ಕಚೇರಿಗಳನ್ನು ಸುತ್ತುವುದು, ಅವಮಾನಿತರಾಗುವುದು ಎಲ್ಲ ತಪ್ಪುತ್ತದೆ. ಅಥವಾ ಇನ್ನೊಂದು ವಿಧಾನವಿದೆ: ನಾಡಿನ ಹೆಸರಾಂತ ಸಾಹಿತಿಗಳ ಒಂದು ಪಟ್ಟಿಯನ್ನು ಪುಸ್ತಕಗಳ ಆಯ್ಕೆ ಸಮಿತಿಯ ಎಲ್ಲ 25 ಸದಸ್ಯರಿಗೆ ಮೊದಲೇ ಕೊಟ್ಟಿರಬೇಕು. ಈ ಪಟ್ಟಿಯಲ್ಲಿರುವವರ ಯಾವುದೇ ಹೊಸ ಪುಸ್ತಕ ಬಂದರೂ ಖರೀದಿಸುವಂತೆ ಸರ್ಕಾರ ಆದೇಶ ನೀಡಿರಬೇಕು.

ದಿಲ್ಲಿಯಲ್ಲಿರುವ ‘ಅಮೆರಿಕನ್‌ ಲೈಬ್ರರಿ ಆಫ್‌ ಕಾಂಗ್ರೆಸ್‌’ನ ಕಚೇರಿಯಲ್ಲಿ 40 ವರ್ಷಗಳ ಹಿಂದೆ ನಾನು ಕನ್ನಡದ ಹೊಸ ಪುಸ್ತಕಗಳನ್ನು ಆಯ್ಕೆ ಮಾಡುವ ಅರೆಕಾಲಿಕ ಹುದ್ದೆಯಲ್ಲಿದ್ದಾಗ ನನ್ನ ಕೈಗೆ ಅಂಥದ್ದೊಂದು ಪಟ್ಟಿಯನ್ನು ಅಮೆರಿಕದ ಗ್ರಂಥಪಾಲರೇ ಕೊಟ್ಟಿದ್ದರು (ಆ ಕಚೇರಿಯಲ್ಲಿ ಕೂತಿದ್ದಾಗಲೇ ಡಾ. ಯು.ಆರ್.‌ಅನಂತಮೂರ್ತಿಯವರ ಹೊಚ್ಚ ಹೊಸ ‘ಮೌನಿ’ ಕಥಾ ಸಂಕಲನ ನನ್ನ ಆಯ್ಕೆಗೆಂದು ಟೇಬಲ್‌ಗೆ ಬಂದಿತ್ತು). ಅಮೆರಿಕದವರು ಕನ್ನಡಿಗರಿಗೆ ತೋರುವ ಗೌರವದ ಒಂದು ಪಾಲನ್ನಾದರೂ ಕನ್ನಡಿಗರು ಕನ್ನಡ ಸಾಹಿತಿಗಳಿಗೆ ತೋರಬೇಕು.

ADVERTISEMENT

ನಾಗೇಶ ಹೆಗಡೆ, ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.