ADVERTISEMENT

ವೈಯಕ್ತಿಕ ಭಾವನೆಗಳಿಗೆ ಬೆಲೆಯಿರಲಿ

ಪ್ರಜಾವಾಣಿ ವಿಶೇಷ
Published 3 ಡಿಸೆಂಬರ್ 2018, 19:45 IST
Last Updated 3 ಡಿಸೆಂಬರ್ 2018, 19:45 IST

ಮಾರ್ಷಲ್ ಮಕ್ಲೂಹನ್‌ನ ಗ್ಲೋಬಲ್ ವಿಲೇಜಿನ ಕಲ್ಪನೆ ಮತ್ತಷ್ಟು ವಿಸ್ತೃತವಾಗಿ ಅಂಗೈಯಲ್ಲೇ ಜಗತ್ತು ಬಂದು ಕುಳಿತಾಗಿದೆ. ಎಲ್ಲರಲ್ಲೂ ಮೊಬೈಲ್ ಕ್ಯಾಮೆರಾಗಳು, ಸಾಲದ್ದಕ್ಕೆ ಕ್ಷಣಾರ್ಧದಲ್ಲಿ ಕುಳಿತಲ್ಲಿಂದಲೇ ಎಲ್ಲವನ್ನೂ ವಿಡಿಯೊ ರೆಕಾರ್ಡ್ ಮಾಡಿ ವಿಶ್ವಕ್ಕೆ ತಿಳಿಸುವ ಅವಕಾಶ. ತಮಗನಿಸಿದ್ದು, ಕಂಡದ್ದು ತೋಚಿದ್ದು ಎಲ್ಲವನ್ನೂ ಸರಿಯೋ ತಪ್ಪೋ ವಿಶ್ಲೇಷಣೆಯಿಲ್ಲದೇ ತನ್ನ ಮೂಗಿನ ನೇರಕ್ಕೆ ಹೌದೆನಿಸಿದ್ದನ್ನು ವಾದ ಮಾಡುವ, ತನ್ನದೇ ಸರಿಯೆಂಬ ಮೊಂಡುತನ ತೋರುವ ಮನಸ್ಥಿತಿಯೂ ಹೆಚ್ಚಿದೆ. ಮೊನ್ನೆ ನಟಿ, ರಾಜಕಾರಣಿ ರಮ್ಯಾ ವಿಷಯದಲ್ಲಿ ಆಗಿದ್ದು ಅದೇ. ಅಂಬರೀಷ್ ಅಂತ್ಯಕ್ರಿಯೆಯಲ್ಲಿ ಅವರು ಪಾಲ್ಗೊಳ್ಳಲಿಲ್ಲ, ಅಂತಿಮ ನಮನ ಸಲ್ಲಿಸಲು ಬರಲಿಲ್ಲ ಎಂಬುದು ಕೆಲವರ ಆಕ್ಷೇಪ. ತಮ್ಮ ಕಾಲುನೋವಿನ ಸಮಸ್ಯೆಯನ್ನು ಅವರು ಫೋಟೊ ಸಮೇತ ಪ್ರಕಟಿಸಿದರೂ ಬರುವ ಮನಸ್ಸಿದ್ದರೆ ಆಕೆ ಬರಬಹುದಿತ್ತು ಎಂಬ ಅಭಿಪ್ರಾಯವೇ ಅನೇಕರದ್ದು. ವೀಲ್ ಚೇರಿನಲ್ಲಾದರೂ ಆಕೆ ಬಂದಿದ್ದಿದ್ದರೆ ಅದೇ ಅವರ ಮುಂದಿನ ರಾಜಕೀಯ ಗೆಲುವಿಗೂ ಅನುಕೂಲವಾಗುತ್ತಿತ್ತು ಎಂಬವರೂ ಇದ್ದಾರೆ.

ಪ್ರಜ್ಞಾವಂತರಾದ ಯಾರಿಗೇ ಆದರೂ ನಿರ್ದಿಷ್ಟ ಕಾರ್ಯಕ್ಕೆ, ಅದು ಶುಭಕಾರ್ಯವಿರಲಿ, ಅಶುಭಕಾರ್ಯವಿರಲಿ, ತಾನು ಹೋಗಬೇಕೇ ಬೇಡವೇ ಎಂದು ನಿರ್ಧರಿಸುವ ಸ್ವಾತಂತ್ರ್ಯವಂತೂ ಇದ್ದೇ ಇದೆ. ಅದು ಅವರವರ ವೈಯಕ್ತಿಕ ನಿಲುವು. ಸ್ವತಃ ಆರೋಗ್ಯ ಸಮಸ್ಯೆಯಿಂದ ಅವರು ಬಾರದೇ ಇದ್ದುದು ನಿಜವಾಗಿದ್ದಿದ್ದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಮಾಡಿದ ಟೀಕಾಪ್ರಹಾರ ನಿಜಕ್ಕೂ ಒಳ್ಳೆಯದಲ್ಲ. ಎಲ್ಲವೂ ಅತಿರೇಕವೇ ಎನಿಸುತ್ತಿರುವ ಈ ಕಾಲಘಟ್ಟದಲ್ಲಿ ನೈಜ ವಿಶ್ವಾಸಕ್ಕೆ ಬೆಲೆಯಿರಲಿ. ತೋರಿಕೆಯ ಆಡಂಬರಕ್ಕೆ ಬೆಲೆ ಕೊಡುವ ಮನಸ್ಸುಗಳು ಬದಲಾಗಲಿ. ಒತ್ತಾಯ ದಿಂದಲೋ ಅವಕಾಶವಾದಿಯಾಗುವ ನಿಟ್ಟಿನಲ್ಲೋ ಭಾಗವಹಿಸುವುದಕ್ಕಿಂತ ಮೌನವಾಗಿ ಹಿಂದೆ ನಿಲ್ಲುವುದೇ ಲೇಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.