ADVERTISEMENT

ಆನವಟ್ಟಿಯಲ್ಲಿ ನಾಟಕದ ಮೇಲಿನ ದಾಳಿಯನ್ನು ಕಲಾವಿದರು, ಪ್ರಜ್ಞಾವಂತರು ಖಂಡಿಸಬೇಕು

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 10:08 IST
Last Updated 5 ಜುಲೈ 2022, 10:08 IST

ಜುಲೈ ಮೂರನೆಯ ತಾರೀಕಿನಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ಜತೆಗಿರುವನು ಚಂದಿರ ನಾಟಕದಾಟದ ಮೇಲೆಆಟದ ನಟ್ಟನಡುವೆಯೆಹಲ್ಲೆ ನಡೆದಿರುವುದು ಸಂಘ ಪರಿವಾರ, ಬಜರಂಗ ದಳ, ಹಿಂದುತ್ವಫ್ಯಾಸಿಸಂಎಂಬುದು ನಮ್ಮ ಸಮಾಜವನ್ನು ಹೇಗೆ ಹಾಳುಗೆಡವುತ್ತಿದೆ ಅನ್ನುವುದಕ್ಕೆ ಮತ್ತೊಂದು ಘೋರ ಉದಾಹರಣೆ. ಆ ವೇಳೆಯಲ್ಲಿ ಆಟ ನೋಡುತ್ತಿದ್ದ ನೂರೈವತ್ತು ಜನ ಪ್ರೇಕ್ಷಕರು ಅಂಥ ದುಂಡಾವರ್ತಿಯನ್ನು ಎದುರಿಸಿ ನಿಲ್ಲದೆ, ಅದರ ವಿರುದ್ಧ ಸೊಲ್ಲೆತ್ತದೆ ಸುಮ್ಮನೆ ತಮ್ಮ ತಮ್ಮ ಮನೆಗೆ ತೆರಳಿದರು ಎಂದು ಕೇಳಿ ಮನಸ್ಸಿಗೆ ಆಗುತ್ತಿರುವ ದುಃಖವನ್ನು ಹೇಳಿಕೊಳ್ಳಲು ಮಾತು ಸಾಲದು.

ಘಟನೆ ನಡೆದದ್ದು ಮೊನ್ನೆ, ಜುಲೈ ಮೂರರಂದು. ಈವತ್ತು ಜುಲೈ ಐದನೆಯ ದಿನ. ಆದರೆ ಆ ಫ್ಯಾಸಿಸ್ಟ್ ದಾಳಿಕೋರರ ವಿರುದ್ಧ ಈವರೆಗೂ ಕಾನೂನಿನ ಕ್ರಮ ಕೈಗೊಳ್ಳದಿರುವುದಕ್ಕೆ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು, ಗೃಹ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವರು, ಆ ಇಲಾಖೆಯ ಅಧಿಕಾರಿಗಳು, ಕರ್ನಾಟಕ ನಾಟಕ ಅಕಾಡೆಮಿಯ ಮುಖ್ಯಸ್ಥರು, ಆನವಟ್ಟಿಯವಲ್ಲಿ ಆ ಆಟವನ್ನು ಪ್ರಾಯೋಜಿಸಿದ ಅಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಶಾಖೆಯವರು ( ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ಮುಖ್ಯಸ್ಥರು) – ಇವರೆಲ್ಲರೂ ಕರ್ತವ್ಯಲೋಪವೆಸಗಿದವರಾಗಿ ಕರ್ನಾಟಕ ಜನತೆಯ ಮುಂದೆ ನಿಲ್ಲಬೇಕಾಗಿದೆ. ಸೊರಬ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಕುಮಾರ್ ಬಂಗಾರಪ್ಪನವರು ತಾವು ರಾಜಕೀಯ ಕ್ಷೇತಕ್ಕೆ ಇಳಿಯುವ ಮುನ್ನ ಸ್ವತಃ ನಟರಾಗಿದ್ದವರು. ಅವರು ಕೂಡ ಇಂಥ ಎಲ್ಲವುದರ ಹೊಣೆ ಹೊರಬೇಕಾಗುತ್ತದೆ.

ಆನವಟ್ಟಿಯ ಪೊಲೀಸರು, ಶಿವಮೊಗ್ಗ ಜಿಲ್ಲೆಯ ಪೊಲೀಸ್ ಮುಖ್ಯಸ್ಥರು, ಹಾಗೂ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಅವರು ಈ ಕೂಡಲೆ ಆ ಪಾತಕರ ದಸ್ತಗಿರಿ ಮಾಡಬೇಕು. ಆ ನಾಟಕದ ಆಟವು ಎಲ್ಲಿ ಬೇಕಾದರೆ ಅಲ್ಲಿ ಮುಕ್ತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಹಾಗೆ ಮಾಡುವುದು ಅವರ ಪವಿತ್ರ ಕರ್ತವ್ಯವಾಗಿದೆ.

ADVERTISEMENT

ರಾಜ್ಯದ ವಿವಿಧೆಡೆಯ ರಂಗಾಯಣಗಳು, ನೀನಾಸಂ ರಂಗಶಿಕ್ಷಣ ಕೇಂದ್ರ, ರಾಷ್ಟ್ರೀಯ ನಾಟಕ ಶಾಲೆ - ಇವೆಲ್ಲವೂ ನಾಡಿನ ಹಾಗೂ ದೇಶದ ಪ್ರಮುಖ ರಂಗಸಂಸ್ಥೆಗಳು; ರಾಜ್ಯ ಮತ್ತು ಒಕ್ಕೂಟ ಸರಕಾರಗಳಿಂದ ದೇಣಿಗೆ ಪಡೆಯುತ್ತ ಬಂದಿರುವಂಥವು. ಈ ಇಂಥ ಸಂಸ್ಥೆಗಳು, ಹಾಗೂ ಉಳಿದೆಲ್ಲ ರಂಗಸಂಸ್ಥೆ ಹಾಗೂ ತಂಡಗಳವರು, ಮತ್ತು ಎಲ್ಲ ರಂಗಾಸಕ್ತರು, ಲೇಖಕರು, ಕಲಾವಿದರು ಹಾಗೂ ಪ್ರಜ್ಞಾವಂತರು ಈ ದಾಳಿಯನ್ನು ಬಲವಾಗಿ ಖಂಡಿಸಿ ಆರೋಗ್ಯವಂತ ಸಾಮಾಜಿಕ ಜೀವನದ ತತ್ತ್ವವನ್ನು ಎತ್ತಿಹಿಡಿಯಬೇಕಿದೆ.

ಕಡೆಯದಾಗಿ, ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥೆಯವರು ನಿಜವಾಗಿಯೂ ಶಿವತತ್ತ್ವವನ್ನು ನಂಬುತ್ತಾರೆಯಾದರೆ, ಆ ತತ್ತ್ವದ ಅಪಾರ ಕಾರುಣ್ಯವನ್ನು ಮೈಗೂಡಿಸಿಕೊಂಡಿದ್ದಾರೆಯಾದರೆ, ಅವರು ರಂಗಬೆಳಕು ತಂಡದ ಈ ಪ್ರಯೋಗದ ಆಟವನ್ನು ತಮ್ಮ ಸುಪರ್ದಿಯಲ್ಲಿರುವ ಎಲ್ಲ ಮಂದಿರಗಳಲ್ಲಿ, ಸಂಸ್ಥೆಗಳ ಆವರಣದಲ್ಲಿ ಏಪರ್ಡಿಸಿ, ಆನವಟ್ಟಿಯ ಫ್ಯಾಶಿಸ್ಟರು ವೀರಶೈವ ಕಲ್ಯಾಣಮಂಟಪವೊಂದರಲ್ಲಿ ಆ ಶಿವನ ಹೆಸರಿನಲ್ಲಿ ಎಸಗಿದ ಪಾತಕಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು, ತಾವು ಅಸಲಿ ಶಿವತಾತ್ತ್ವಿಕರು ಅನ್ನಿಸಿಕೊಳ್ಳಬೇಕು.

- ರಘುನಂದನ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.