ADVERTISEMENT

ಪುಸ್ತಕದಿಂದ ದೊರೆತ ಅರಿವು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 15:49 IST
Last Updated 17 ನವೆಂಬರ್ 2021, 15:49 IST

ಗ್ರಂಥಾಲಯ ಕುರಿತಂತೆ ಡಾ. ಕೆ.ಎಸ್.ಪವಿತ್ರ ಅವರ ಲೇಖನ (ಸಂಗತ, ನ. 15) ಯೋಚನೆಗೆ ಹಚ್ಚುವಂತಿದೆ. ಗ್ರಂಥಾಲಯಗಳಿಗೆ ಹೋಗುವವರ ಸಂಖ್ಯೆ ಕ್ಷೀಣಿಸುತ್ತಿದ್ದು ಇದನ್ನು ಸರಿಪಡಿಸಲು ಮಕ್ಕಳಿರುವಾಗಲೇ ಓದುವ ಅಭ್ಯಾಸವನ್ನು ರೂಢಿಸಬೇಕು. ಆದರೆ ಈಗಿನ ಮಕ್ಕಳಲ್ಲಿ ಪಠ್ಯಪುಸ್ತಕದ ವಿಷಯ ಹೊರತುಪಡಿಸಿ ಹೊರಗಿನ ಜ್ಞಾನ ತೀರಾ ಕಮ್ಮಿ. ಪಠ್ಯಪುಸ್ತಕಗಳಿಗೆ ಹೊರತಾದ ಪುಸ್ತಕಗಳನ್ನು ಓದುವ ರೂಢಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಯಲ್ಲಿ, ಯೋಚನಾ ಸಾಮರ್ಥ್ಯದಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳು ಪುಸ್ತಕಗಳಿಗಿಂತ ಮೊಬೈಲ್‌ಗಳಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಪೋಷಕರು ಪುಟ್ಟ ಮಕ್ಕಳಿಗೆ ಊಟ ಮಾಡಿಸುವಾಗ, ಅವು ಅಳುವಾಗ, ಹಟ ಹಿಡಿದಾಗ ಮೊಬೈಲ್ ಕೊಡುವ ಅಭ್ಯಾಸ ಮಾಡಿರುತ್ತಾರೆ. ಇದು ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಅವರಲ್ಲಿ ಯೋಚನಾಶಕ್ತಿ ಕುಂದುವಂತೆ ಮಾಡುತ್ತದೆ.

ಮಕ್ಕಳು ಪೋಷಕರ ಮಾತು ಕೇಳುವುದು ವಿರಳ. ಆದರೆ ಅವರನ್ನು ಅನುಸರಿಸುತ್ತಾರೆ. ಪೋಷಕರು ಮೊಬೈಲ್ ಹಿಡಿದು ಕುಳಿತರೆ ಮಕ್ಕಳೂ ಅದೇ ಕೆಲಸ ಮಾಡುತ್ತಾರೆ. ಅದೇ ಪೋಷಕರು ಪುಸ್ತಕ ಹಿಡಿದು ಕುಳಿತರೆ ಮಕ್ಕಳೂ ಅದನ್ನು ಅನುಸರಿಸುತ್ತಾರೆ. ‘ಪುಸ್ತಕದಿಂದ ದೊರೆತರಿವು ಮಸ್ತಕದಿ ತಳೆದ ಮಣಿ’ ಎಂಬ ಡಿವಿಜಿ ಅವರ ಮಾತುಗಳನ್ನು ಮೊದಲು ಪೋಷಕರು ಅರಿಯಬೇಕಿದೆ.

-ಬಿ.ಎಸ್.ಚೈತ್ರ,ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.