ADVERTISEMENT

ಸಿ.ಎಂ ಸಂಬಂಧಿಕರು ಪ್ರಶ್ನಾತೀತರೇ?

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 19:45 IST
Last Updated 30 ಆಗಸ್ಟ್ 2019, 19:45 IST

ಚಾಮುಂಡೇಶ್ವರಿ ಸನ್ನಿಧಿಗೆ ತೆರಳುವಾಗ ತಮ್ಮನ್ನು ತಡೆದರು ಎಂಬ ಕಾರಣಕ್ಕೆ, ಮುಖ್ಯಮಂತ್ರಿಯವರ ತಂಗಿಯ ಮಗ ರಾಜೇಶ್ ‘ಹಂಗಾದ್ರೆ ನೀನು ಇಲ್ಲಿಂದ ಬೇಗ ಹೋಗ್ತಿಯ’ ಎಂದು ಡಿಸಿಪಿಗೆ ಎಚ್ಚರಿಸಿರುವುದು (ಪ್ರ.ವಾ., ಆ. 30) ವಿಐಪಿ ಸಂಸ್ಕೃತಿಯ (ವಿಕೃತಿಯ?) ಕೆಟ್ಟ ಮುಖವನ್ನು ಅನಾವರಣಗೊಳಿಸಿದೆ.

ನಮ್ಮಲ್ಲಿ ರಾಜಕಾರಣಿಯೊಬ್ಬ ಅಧಿಕಾರಕ್ಕೇರಿದಾಗ ಆತನ ಹತ್ತಿರದ ಸಂಬಂಧಿಗಳೆಲ್ಲ ತಾವೇ ಅಧಿಕಾರಕ್ಕೆ ಬಂದಂತೆ ಆಡುತ್ತಾರೆ. ಮತದಾರರುರಾಜಕಾರಣಿಯನ್ನು ಜನರ ಸೇವೆ ಮಾಡಲು ಕುರ್ಚಿಯ ಮೇಲೆ ಕೂರಿಸಿರುತ್ತಾರೆಯೇ ಹೊರತು ಆತನ ಸಂಬಂಧಿಕರನ್ನಲ್ಲ. ದುರಂತವೆಂದರೆ, ಸಂಬಂಧಿಗಳ ಇಂತಹ ಕಾಟ, ಗ್ರಾಮ ಪಂಚಾಯಿತಿ ಮಟ್ಟದಿಂದಲೂ ಇರುತ್ತದೆ.

ಅಷ್ಟಕ್ಕೂ ಪೊಲೀಸ್‌ ಅಧಿಕಾರಿಗೆ ಎಚ್ಚರಿಕೆ ನೀಡಲು ರಾಜೇಶ್ ಅವರಿಗೆ ಯಾವ ಅಧಿಕಾರವಿದೆ? ಮುಖ್ಯಮಂತ್ರಿ ಜೊತೆಗಿನ ಸಂಬಂಧವನ್ನು ಅವರು ಮನೆಯಲ್ಲಿ ಇಟ್ಟುಕೊಳ್ಳಲಿ. ಇದು ಪ್ರಜಾಪ್ರಭುತ್ವವೇ ಹೊರತು, ರಾಜಪ್ರಭುತ್ವವಲ್ಲ. ತಮಗೆ ವಿಶೇಷ ಮರ್ಯಾದೆ ಬೇಕೆಂದರೆ ಅದನ್ನು ಅವರು ಕಷ್ಟಪಟ್ಟು ಸಂಪಾದಿಸಲಿ. ಅಧಿಕಾರದಲ್ಲಿರುವ ಸಂಬಂಧಿಯ ಕೃಪೆಯಿಂದ ಅಧಿಕಾರ ಚಲಾಯಿಸಲು ಹೋಗಬಾರದು. ತಮ್ಮ ಹೆಸರು-ಸ್ಥಾನಮಾನ ಬಳಸದಂತೆ ಮುಖ್ಯಮಂತ್ರಿ ತಮ್ಮ ಎಲ್ಲ ಸಂಬಂಧಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಿ. ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಬಂದ ಕಾರಣಕ್ಕೆ, ರಾಜೇಶ್ ಅವರ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುದರ ಬಗ್ಗೆಯೂ ಚಿಂತಿಸಲಿ.

ADVERTISEMENT

- ಸುಘೋಷ ಎಸ್. ನಿಗಳೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.