ADVERTISEMENT

ಕೇಂದ್ರ ಸರ್ಕಾರವೋ ಒಕ್ಕೂಟ ಸರ್ಕಾರವೋ?

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 17:58 IST
Last Updated 21 ಫೆಬ್ರುವರಿ 2021, 17:58 IST

ಮಾಧ್ಯಮಗಳಲ್ಲಿ, ಅಕಾಡೆಮಿಕ್ ಚರ್ಚೆಗಳಲ್ಲಿ, ಅಧ್ಯಯನ ಪ್ರಬಂಧಗಳಲ್ಲಿ ಹಾಗೂ ಸಾಮಾನ್ಯ ಮಾತುಕತೆ
ಗಳಲ್ಲಿ ಭಾರತ ಸರ್ಕಾರವನ್ನು ಕೇಂದ್ರ ಸರ್ಕಾರ ಎಂದು ಕರೆಯುವುದು ರೂಢಿಯಲ್ಲಿದೆ. ಆದರೆ ಇದು ಸಂವಿಧಾನಾತ್ಮಕ ನುಡಿಯಲ್ಲ. ನಮ್ಮ ಸಂವಿಧಾನದಲ್ಲಿ ಭಾರತ ಸರ್ಕಾರವನ್ನು ಒಕ್ಕೂಟ (ಯೂನಿಯನ್) ಸರ್ಕಾರ ಎಂದು ಕರೆಯಲಾಗಿದೆ. ಉದಾಹರಣೆಗೆ: ಸಂವಿಧಾನದ ಪರಿಚ್ಛೇದ 1ರಲ್ಲಿ ಭಾರತವನ್ನು ‘ಯೂನಿಯನ್ ಆಫ್ ಸ್ಟೇಟ್ಸ್’ ಎಂದರೆ, 7ನೆಯ ಶೆಡ್ಯೂಲಿನಲ್ಲಿನ ಪರಿಚ್ಛೇದ 245ರಲ್ಲಿ ‘ಒಕ್ಕೂಟ ಪಟ್ಟಿ’ ಎಂದು ಕರೆಯಲಾಗಿದೆ. ನಿಜ, ಸಂವಿಧಾನದಲ್ಲಿ ಸಂಯುಕ್ತ (ಫೆಡರಲ್) ಎಂಬ ನುಡಿ ಬಳಸಿಲ್ಲ. ವಿಸ್ತೃತ ನೆಲೆಯಲ್ಲಿ ಯೂನಿಯನ್ ಎಂಬುದು ಫೆಡರಲ್ ಎಂಬುದನ್ನು ಸೂಚಿಸುತ್ತದೆ. ನಮ್ಮ ಸಂವಿಧಾನಾತ್ಮಕ ಒಕ್ಕೂಟ ತತ್ವವು ಇಂದು ಅಳ್ಳಕಗೊಂಡಿರುವಾಗ ಮತ್ತು ಆಕ್ರಮಣಕ್ಕೆ ಒಳಗಾಗಿರುವ ಸಂದರ್ಭದಲ್ಲಿ ಇದಕ್ಕೆ ಒಂದು ಗೌರವ ನೀಡುವ ‘ಒಕ್ಕೂಟ ಸರ್ಕಾರ’ ಎಂಬ ನುಡಿಯನ್ನು ಬಳಸುವುದು ಅಗತ್ಯ.

ಒಕ್ಕೂಟ ವ್ಯವಸ್ಥೆಯಲ್ಲಿನ ಎರಡೂ ಪಕ್ಷಗಳಿಗೆ (ರಾಜ್ಯ ಸರ್ಕಾರಗಳು ಮತ್ತು ಭಾರತ ಸರ್ಕಾರ) ಸಮಾನ
ಹಕ್ಕು- ಅಧಿಕಾರಗಳನ್ನು ಸಂವಿಧಾನ ನೀಡಿದೆ. ಇಂದು ಒಕ್ಕೂಟ ರಾಜಕಾರಣವು ಬಿಕ್ಕಟ್ಟಿಗೆ ಸಿಲುಕಿದೆ. ಅಖಂಡತೆ ತತ್ವಕ್ಕೆ ಬದ್ಧವಾದ ಆಳುವ ಪಕ್ಷವು ದೇಶವನ್ನು ಏಕೀಕೃತ (ಯೂನಿಟರಿ) ವ್ಯವಸ್ಥೆಯನ್ನಾಗಿ ಮಾಡುವ ಕ್ರಮಗಳನ್ನು ತೆರೆದ ಹಾಗೂ ಪ್ರಚ್ಛನ್ನ ರೀತಿಯಲ್ಲಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟ ತತ್ವವನ್ನು ಸದಾ ನೆನಪಿಸುವ ಒಕ್ಕೂಟ ಸರ್ಕಾರ, ಒಕ್ಕೂಟ ಬಜೆಟ್, ಒಕ್ಕೂಟ ಸಚಿವ ಸಂಪುಟ ಇತ್ಯಾದಿ ಸಂವಿಧಾನಾತ್ಮಕ ನುಡಿಗಳನ್ನು ಬಳಸುವುದು ಅಗತ್ಯ.

ಟಿ.ಆರ್.ಚಂದ್ರಶೇಖರ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.