ADVERTISEMENT

ವಿಷವರ್ತುಲದಲ್ಲಿ ಮಿಂಚುಕಂಗಳ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 19:31 IST
Last Updated 28 ಅಕ್ಟೋಬರ್ 2020, 19:31 IST

ನನ್ನ ಹಳ್ಳಿಯಿಂದ ಹತ್ತಿರದ ನಗರಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಒಂದು ಬಾರ್‌ ಇದೆ. ಈಚೆಗೆ ಆ ರಸ್ತೆಯಲ್ಲಿ ಹೋಗುತ್ತಿದ್ದಾಗ, ಚಿಣ್ಣರ ದಂಡೊಂದು ಬಾರಿನ ಬಾಗಿಲಿನಿಂದ ರಸ್ತೆಗಿಳಿದು ಊರ ಕಡೆ ಓಡಿಬರುತ್ತಿದ್ದುದು ಕಾಣಿಸಿತು. ಚಕಿತಗೊಂಡ ನಾನು ಮಕ್ಕಳನ್ನು ತಡೆದು ವಿಚಾರಿಸಿದಾಗ, ನಾಗರಿಕತೆಯೇ ನಾಚಿಕೊಳ್ಳುವಂತಹ ಸಂಗತಿಯೊಂದು ಬಯಲಾಯಿತು. ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ಮದ್ಯಪ್ರಿಯರಿಗೆ ಈ ಮಕ್ಕಳು ಮದ್ಯ ಮತ್ತು ಇನ್ನಿತರ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು! ಸಿರಿವಂತರು, ವೃದ್ಧರು, ವಯಸ್ಕರು, ರೋಗಿಗಳು, ಕದ್ದು ಕುಡಿಯುವವರು ಮತ್ತು ಕೆಲವು ಬಾರಿ ಸ್ವತಃ ಪೋಷಕರೇ ತಮ್ಮ ಮಕ್ಕಳನ್ನು ಇಂತಹ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ.

ಒಂದು ಬಾರಿ ಮದ್ಯ ಸರಬರಾಜು ಮಾಡಿದರೆ ಐದರಿಂದ ಹತ್ತು ರೂಪಾಯಿಯವರೆಗೆ ಭಕ್ಷೀಸು ಪಡೆಯುವ ಮಕ್ಕಳು, ದಿನವಿಡೀ ಊರ ಹೊರಗಿನ ಈ ಬಾರ್ ಹತ್ತಿರವೇ ಸುಳಿದಾಡುತ್ತಾರೆ. ಈ ಮಕ್ಕಳ ಹಸಿವನ್ನು ಅಲ್ಲಿಯೇ ಸಿಗುವ ಕಳಪೆ ಗುಣಮಟ್ಟದ ಆಹಾರ ಮತ್ತು ಕಲುಷಿತ ನೀರು ಪೂರೈಸುತ್ತವೆ. ಈ ಚಿಣ್ಣರು 3ರಿಂದ 9ನೇ ತರಗತಿಗಳಲ್ಲಿ ಓದುತ್ತಿದ್ದು, ಶಾಲೆಗಳಿಗೆ ರಜೆ ಇರುವುದರಿಂದ ಈ ರೀತಿಯ ‘ಡೆಲಿವರಿ ಬಾಯ್’ಗಳಾಗಿದ್ದಾರೆ. ಶುಭ್ರ ದಿರಿಸು ತೊಟ್ಟು, ಪಾಟಿಚೀಲ ಬೆನ್ನಿಗೇರಿಸಿಕೊಂಡು ಶಾಲೆಗೆ ಹೋಗಬೇಕಾದವರು ಕೊಳಕು ಬಟ್ಟೆಯ ಎದೆಜೇಬಿನಲ್ಲಿ ಸಂಡಿಗೆ ಪ್ಯಾಕೆಟ್, ನಿಕ್ಕರ್ ಜೇಬಿನಲ್ಲಿ ಮದ್ಯ ಮತ್ತು ನೀರಿನ ಪ್ಯಾಕೆಟ್ ಇರಿಸಿಕೊಂಡು ಓಡುವುದನ್ನು ನೋಡಿದರೆ ಎಂತಹ ಕಲ್ಲೆದೆಗೂ ನೋವಾಗದಿರದು. ತಮಗೆ ಅರಿವಿಲ್ಲದಂತೆ ವಿಷವರ್ತುಲವೊಂದರ ಭಾಗವಾಗಿರುವ ಈ ಮಿಂಚುಕಂಗಳ ಚಿಣ್ಣರನ್ನು ರಕ್ಷಿಸಬೇಕಿರುವುದು ಸಮಾಜದ ಕರ್ತವ್ಯ. ಮೊದಲಿಗೆ ಬಾರ್‌ಗಳಲ್ಲಿ ಮಕ್ಕಳ ಪ್ರವೇಶವನ್ನು ನಿಷೇಧಿಸಬೇಕು. ಮಕ್ಕಳಿಂದ ಮದ್ಯ ತರಿಸಿಕೊಳ್ಳುವವರ ಮತ್ತು ಮಕ್ಕಳಿಗೆ ಮದ್ಯ ಮಾರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.