ADVERTISEMENT

ಗಮಕವಿಲ್ಲದೆ ಸಮ್ಮೇಳನ?

​ಪ್ರಜಾವಾಣಿ ವಾರ್ತೆ
Published 21 ಜೂನ್ 2018, 16:07 IST
Last Updated 21 ಜೂನ್ 2018, 16:07 IST

‘ಗಮಕ ಅನಾಥ ಶಿಶುವೇ’? (ವಾ.ವಾ., ಜೂನ್‌ 13) ಎಂಬ ಉಷಾ ಕಟ್ಟೆಮನೆ ಅವರ ಪತ್ರಕ್ಕೆ ಪೂರಕವಾಗಿ ಈ ಅಭಿಪ್ರಾಯ.

ಕನ್ನಡ ಸಾಹಿತ್ಯ ರಾಶಿಯಲ್ಲಿರುವ ಚಂಪೂ, ರಗಳೆ, ಷಟ್ಪದಿ ಕಾವ್ಯಗಳನ್ನು ಇಂದಿಗೂ ವಾಚನ- ವ್ಯಾಖ್ಯಾನಗಳ ಮೂಲಕ ಜನರ ಬಳಿಗೆ ಕೊಂಡೊಯ್ಯುತ್ತಿರುವುದು ಗಮಕ ಕಲೆಯೇ. ಹಳಗನ್ನಡ ವಾಚನದ ಸೊಗಸು ಗೊತ್ತಾಗಬೇಕಾದರೆ ಗಮಕವನ್ನು ಕೇಳಲೇಬೇಕು. ಆದರೆ ಸಾಹಿತ್ಯ ಪರಿಷತ್ತಿಗೆ ಇದು ಮನವರಿಕೆ ಆದಂತಿಲ್ಲ.

ಶ್ರವಣಬೆಳಗೊಳದಲ್ಲಿ ಇದೇ ತಿಂಗಳ 24ರಿಂದ 26ರವರೆಗೆ ನಡೆಯಲಿರುವ ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿಗಮಕಕ್ಕೂ ಅವಕಾಶ ಮಾಡಿಕೊಡಬೇಕೆಂಬ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರ ಮನವಿಗೆ ಸಾಹಿತ್ಯ ಪರಿಷತ್ತು ಕವಡೆಕಾಸಿನ ಬೆಲೆಯನ್ನೂ ನೀಡಿಲ್ಲ. ಬದಲಿಗೆ ‘ಹಳಗನ್ನಡದ ಓದು’ ಎಂಬ ಒಂದು ಗೋಷ್ಠಿಯನ್ನೇ ಇಟ್ಟಿರುವುದು ಹಾಸ್ಯಾಸ್ಪದ. ಗಮಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಹಳಗನ್ನಡ- ಗಮಕದ ಸಂಬಂಧದ ಬಗ್ಗೆ ತಮ್ಮ ಧೋರಣೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹೊತ್ತು ಕಬ್ಬಿಣದ ಕಡಲೆ ಎನ್ನುತ್ತಾ ಪಠ್ಯಪುಸ್ತಕಗಳಿಂದ ಮಾಯವಾಗುವಂತೆ ಮಾಡಿರುವ ಹಳಗನ್ನಡದ ಕಾವ್ಯಗಳನ್ನು ಒಂದಿಷ್ಟೂ ಕಷ್ಟಪಡದೆ ಓದುವ, ಕಾವ್ಯದ ಸೊಗಸನ್ನು ಕೇಳುಗರಿಗೆ ನೇರವಾಗಿ ತಲುಪಿಸುತ್ತಿರುವ ಗಮಕವನ್ನು ಕೈಬಿಟ್ಟದ್ದು ಕನ್ನಡಕ್ಕಾದ ಅವಮಾನ.

ADVERTISEMENT

ಗಮಕವನ್ನು ಹೊರಗಿಟ್ಟು ನಡೆಸುತ್ತಿರುವ ಈ ಸಮ್ಮೇಳನವು ಕನ್ನಡಕ್ಕೆ ದೊರೆತಿರುವ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತದೆ?

ಶಾಂತಾ ಗೋಪಾಲ್, ಕಾರ್ಯದರ್ಶಿ, ಕರ್ನಾಟಕ ಗಮಕಕಲಾ ಪರಿಷತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.