ADVERTISEMENT

ಆತ್ಮಸಾಕ್ಷಿಯ ಪಿಸುಮಾತಿಗೆ ಕಿವಿಗೊಡೋಣ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 19:30 IST
Last Updated 5 ಏಪ್ರಿಲ್ 2021, 19:30 IST

‘...ಆತ್ಮಸಾಕ್ಷಿಯ ಪಿಸುಮಾತು’ (ಸಂಗತ, ಏ. 5) ಎಂಬ ಡಾ. ಜ್ಯೋತಿ ಅವರ ಲೇಖನ ಅರ್ಥಪೂರ್ಣವಾಗಿದೆ. ಇಂದು ಆತ್ಮಸಾಕ್ಷಿಯನ್ನು ಗಾಳಿಗೆ ತೂರಿದವರೇ ಹೆಚ್ಚು ಮಂದಿ. ಹಲವರು ಅದರ ಪಿಸುಮಾತನ್ನು ಕೇಳಿಸಿಕೊಳ್ಳದ ಜಾಣಕಿವುಡರಾಗಿದ್ದಾರೆ. ಯಾವುದಾದರೂ ವಿಷಯದಲ್ಲಿ ಸಂದೇಹ ಉಂಟಾದಾಗ, ತನ್ನ ಅಂತರಂಗದ ಪಿಸುಮಾತೇ ಪ್ರಮಾಣವೆಂದು ಕಾಳಿದಾಸನು ‘ಶಾಕುಂತಲ’ ನಾಟಕದಲ್ಲಿ ಹೇಳಿರುವುದು ಮನನೀಯವಾಗಿದೆ. ಹಾಗೆ ನೋಡಿದರೆ ಈಗಲೂ ಹಳ್ಳಿಗಳಲ್ಲಿ ಕಡುಬಡವರು, ದೈವದ ಬಗ್ಗೆ ಹೆದರುವವರು ಈ ಆತ್ಮಸಾಕ್ಷಿಯ ಪಿಸುಮಾತಿಗೆ ಓಗೊಡುತ್ತಿದ್ದಾರೆ ಎಂಬುದು ಸ್ವಲ್ಪಮಟ್ಟಿಗೆ ಸಮಾಧಾನದ ಸಂಗತಿ.

ಗೋಳಗುಮ್ಮಟದಲ್ಲಿ ನಾವು ಯಾವುದೇ ಮೂಲೆಯಿಂದ ಸಣ್ಣಧ್ವನಿಯಲ್ಲಿ ಮಾತನಾಡಿದರೂ ಅದರ ಪಿಸುಮಾತಿನ ಪ್ರತಿಧ್ವನಿಯು ಎಲ್ಲ ಮೂಲೆಗಳಿಂದಲೂ ಹೊರಹೊಮ್ಮುತ್ತದೆ. ಈ ತತ್ವವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ‘ಅಂತರಂಗದ ಕದವನ್ನು ತೆಗೆದು ನೋಡಣ್ಣ’ ಎಂದು ಶರಣರು ಹೇಳಿದರು. ಶಾಂತಿ, ನೆಮ್ಮದಿ, ಸೌಹಾರ್ದದ ಮರುಸ್ಥಾಪನೆ ಆಗಬೇಕೆಂದರೆ, ಆತ್ಮಸಾಕ್ಷಿಯ ಪಿಸುಮಾತಿಗೆ ನಾವು ಕಿವಿಗೊಡಬೇಕು. ಇಂತಹ ಬದಲಾವಣೆಯು ವ್ಯಕ್ತಿಯಿಂದಲೇ ಆರಂಭಗೊಳ್ಳಬೇಕು.

-ಸೌದಾಮಿನಿ ಪ್ರಭಾಕರ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.