ADVERTISEMENT

ಎಲ್ಲೂ ಇಲ್ಲದ ನಿಯಮ ಸಹಕಾರಿ ಸಂಘದಲ್ಲಿ!

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 19:30 IST
Last Updated 28 ಸೆಪ್ಟೆಂಬರ್ 2021, 19:30 IST

ಕೆಲವು ಸಹಕಾರಿ ಸಂಘಗಳು ಇತ್ತೀಚೆಗೆ ನೇಮಕಾತಿಗಾಗಿ ಹೊರಡಿಸಿದ ಪತ್ರಿಕಾ ಪ್ರಕಟಣೆಗಳಲ್ಲಿ, ಅವು ಅಪೇಕ್ಷಿಸುವ ವಿದ್ಯಾರ್ಹತೆಯು ಗಾಬರಿ ಹುಟ್ಟಿಸುವಂತಿರುತ್ತದೆ. ಗುಮಾಸ್ತ ಹುದ್ದೆಗೆ ಎಂ.ಕಾಂ., ಎಂ.ಬಿ.ಎ., ಎಂ.ಸಿ.ಎ. ವಿದ್ಯಾರ್ಹತೆ ಅಪೇಕ್ಷಿಸಲಾಗಿರುತ್ತದೆ. ಆದರೆ ಎಂ.ಎ., ಎಂ.ಎಸ್ಸಿ. ಪ್ರಸ್ತಾಪ ಇರುವುದಿಲ್ಲ. ಕೆಪಿಎಸ್‍ಸಿ, ಯುಪಿಎಸ್‍ಸಿ ಮತ್ತು ಬ್ಯಾಂಕಿಂಗ್ ನೇಮಕಾತಿ ಮಂಡಳಿಗಳು ಗುಮಾಸ್ತ ಹುದ್ದೆಗೆ ಬಯಸುವ ವಿದ್ಯಾರ್ಹತೆಯು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ. ಅದು ಬಿ.ಎ, ಬಿ.ಕಾಂ, ಬಿ.ಎಸ್ಸಿ. ಹೀಗೆ ಯಾವುದೂ ಇರಬಹುದು. ಕಾಲೇಜುಗಳಲ್ಲಿ ನಡೆಯುವ ಕ್ಯಾಂಪಸ್ ಆಯ್ಕೆ, ಉದ್ಯೋಗ ಮೇಳಗಳಲ್ಲಿ ಪ್ರತಿಷ್ಠಿತ ಕಂಪನಿಗಳು ಅಂಗೀಕೃತಗೊಂಡ ವಿಶ್ವವಿದ್ಯಾಲಯದ ಯಾವುದೇ ಪದವಿಯನ್ನಷ್ಟೇ ನೇಮಕಾತಿ ವೇಳೆ ಪರಿಗಣಿಸುತ್ತವೆ. ಅಲ್ಲಿ ಎಲ್ಲೂ ಇಲ್ಲದ ನಿಯಮ ಈ ಸಹಕಾರಿ ಸಂಘಗಳಲ್ಲಿ ಏಕೆ?

ಸ್ನಾತಕೋತ್ತರ ಪದವಿ ಪಡೆದವರಿಗೆ ಬೇರೆ ಉದ್ಯೋಗಾವಕಾಶಗಳಿವೆ. ಸಹಕಾರಿ ರಂಗದಲ್ಲೂ ಅವರನ್ನೇ ಆಯ್ಕೆ ಮಾಡಿದರೆ, ಅದೇ ಗ್ರಾಮದ ಬಡ ಕೃಷಿಕನ ಮಗ ಪಡೆದ ಬಿ.ಎ. ಪದವಿಗೇನು ಬೆಲೆ? ಕೆಲಸಕ್ಕೂ ವಿದ್ಯೆಗೂ ನಮ್ಮಲ್ಲಿ ಸಂಬಂಧವೇ ಇಲ್ಲ. ಯಾವುದೇ ಪದವಿ ಪಡೆದವರು ಸಹ ಕೆಲಸಕ್ಕೆ ಆಯ್ಕೆಯಾದ ಮೇಲೆ ಅಲ್ಲಿ ಬೇರೆಯೇ ತರಬೇತಿ ಪಡೆಯಲೇಬೇಕು. ಸಹಕಾರಿ ಸಂಘಗಳು ಈ ನೇಮಕಾತಿ ಪ್ರಾಧಿಕಾರಗಳಿಗಿಂತ ಮೇಲಲ್ಲ ಎಂಬುದು ನಮ್ಮ ನಂಬಿಕೆ. ಯಾವುದೇ ವಿಷಯದಲ್ಲಿ ಪದವಿ ಪಡೆದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ. ಸ್ನಾತಕೋತ್ತರ ವ್ಯಾಸಂಗ ಪಡೆದವರಿಗೆ, ಸೇವಾ ಅನುಭವ ಇರುವವರಿಗೆ ಬೇಕಾದರೆ ಆಯ್ಕೆಯ ವೇಳೆ ಹೆಚ್ಚುವರಿ ಅಂಕಗಳ ಮೂಲಕ ಆದ್ಯತೆ ನೀಡಿ. ಒಟ್ಟಿನಲ್ಲಿ ಇಂಥ ಜಾಹೀರಾತುಗಳ ಮೂಲಕ ಸಹಕಾರಿ ಸಂಘಗಳು ನಗೆಪಾಟಲಿಗೆ ಗುರಿಯಾಗದಿರಲಿ.

→→→ಡಾ. ಶ್ರೀಕಾಂತ್‌ ರಾವ್‌,ಸಿದ್ದಾಪುರ, ಕುಂದಾಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.