ADVERTISEMENT

ಲಾಕ್‍ಡೌನ್: ಇನ್ನೊಂದು ಮುಖವೂ ಇದೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 19:45 IST
Last Updated 3 ಏಪ್ರಿಲ್ 2020, 19:45 IST

ಲಾಕ್‍ಡೌನ್ ಪರಿಣಾಮವಾಗಿ ಕುಟುಂಬದವರೆಲ್ಲ ಮನೆಯಲ್ಲೇ ಇದ್ದುಕೊಂಡು, ಅದರ ಸವಿ ಅನುಭವಿಸುವುದನ್ನು ಸಂಗಮೇಶ್ ಆರ್.ನಿರಾಣಿ ಅರ್ಥಪೂರ್ಣವಾಗಿ ವಿವರಿಸಿದ್ದಾರೆ (ಸಂಗತ, ಏ. 2). ಆದರೆ ಇದಕ್ಕೆ ಇನ್ನೊಂದು ಮುಖವೂ ಇದೆ!

ಸಾಫ್ಟ್‌ವೇರ್‌ ಎಂಜಿನಿಯರ್ ಆಗಿರುವ ನನ್ನ ಮಗ ಗುರುವಾರ ಬೆಳಿಗ್ಗೆ ಫೋನ್ ಮಾಡಿ, ‘ಈ ತಿಂಗಳಿಂದ ಆರು ತಿಂಗಳವರೆಗೆ ಸಂಬಳದಲ್ಲಿ ಶೇ 20ರಷ್ಟು ಕಡಿತ ಮಾಡ್ತಾರಂತೆ’ ಎಂದು ತಿಳಿಸಿದ. ನನ್ನದು ಸ್ವಂತ ಉದ್ಯೋಗ. ಈಗ ಮನೆಯೇ ಮಂತ್ರಾಲಯವಾಗಿದೆ. ಬ್ಯಾಂಕಿನಲ್ಲಿದ್ದ ಹಣದಲ್ಲಿ ಮನೆಸಾಮಾನು, ಹಣ್ಣು, ತರಕಾರಿಗೆಂದು ಒಂದಿಷ್ಟು ಖರ್ಚಾಗಿದೆ. ದುಡಿಮೆ ಇಲ್ಲದೇ ಖರ್ಚು ಮಾಡುವುದಾದರೂ ಹೇಗೆ? ಯಾವುದೂ ಆದಾಯವಿಲ್ಲದಿದ್ದರೆ ಮುಂದೇನು ಮಾಡುವುದು ಎಂದು ನನ್ನ ಹೆಂಡತಿಯೂ ಪ್ರಶ್ನಿಸಿದಳು. ಮನೆಯಲ್ಲಿ ಒಟ್ಟಾಗಿ ಇದ್ದುದರ ಫಲವಾಗಿ ಈ ಮಾತು ಕೇಳಬೇಕಾಗಿ ಬಂತು!

ಇನ್ನು ಪತ್ರಿಕಾ ವರದಿಗಳನ್ನು ಓದಿದರೆ, ರೈತರ ಗೋಳು ತಿಳಿಯುತ್ತದೆ. ಅನಾನಸ್, ಬಾಳೆ, ಕಲ್ಲಂಗಡಿ ಮುಂತಾದ ಬೆಳೆಗಳ ಮಾರಾಟ ಸಾಧ್ಯವಾಗದೆ ರೈತರು ಆಕಾಶ ನೋಡುತ್ತಿದ್ದಾರೆ. ಸಾವಿರಾರು ಟನ್ ಅನಾನಸ್ ಬೆಳೆಯುತ್ತಾ ಉತ್ತರ ಭಾರತದ ಕಡೆ ಮಾರುಕಟ್ಟೆ ಕಂಡುಕೊಂಡಿದ್ದ ರೈತರು ಬೆಳೆಯನ್ನು ಕಟಾವು ಮಾಡಿ ಕೈಚೆಲ್ಲಿ ಕುಳಿತಿದ್ದಾರೆ. ಬದುಕಿಗೆ ಆತಂಕ ಒಡ್ಡಿರುವ ಇಂಥ ವರದಿಗಳನ್ನು ಓದುತ್ತಿದ್ದರೆ ನಿದ್ದೆ ಬಾರದು. ದಿನದ ಕೂಲಿ ಮಾಡುವವರು ಮನೆಯೊಳಗಿದ್ದು ಕದ ಮುಚ್ಚಿಕೊಂಡರೆ ಮನಸ್ಸು ಢವ ಢವ ಎನ್ನುತ್ತದೆ.

ADVERTISEMENT

-ಗಣಪತಿ ಶಿರಳಗಿ, ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.