ADVERTISEMENT

ಕೋವಿಡ್ ಲಸಿಕೆ: ಬೊಬ್ಬೆ ಹಾಕಿದ್ದು ಯಾರು?

​ಪ್ರಜಾವಾಣಿ ವಾರ್ತೆ
Published 13 ಮೇ 2021, 19:31 IST
Last Updated 13 ಮೇ 2021, 19:31 IST

‘ಎರಡನೇ ಡೋಸ್‌ಗೆ ಲಸಿಕೆ ಬರಲು ಆರಂಭವಾಗಿದೆ. ಅದಕ್ಕಾಗಿ ಗಾಬರಿ ಬಿದ್ದು ರಾತ್ರಿ ವೇಳೆ ಸರದಿಯಲ್ಲಿ ನಿಂತು ಬೊಬ್ಬೆ ಹೊಡೆಯುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ (ಪ್ರ.ವಾ., ಮೇ 12). ರಾಜ್ಯದಲ್ಲಿ ಲಾಕ್‌ಡೌನ್ ಹೇರಲಾಗಿದೆ. ಹೀಗಾಗಿ ಜನ ರಾತ್ರಿ ವೇಳೆ ಹೊರ ಹೋಗಲು ಸಾಧ್ಯವೇ? ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಹೀಗಾಗಿ ಯಾರೂ ರಾತ್ರಿ ವೇಳೆ ಆಸ್ಪತ್ರೆಗಳಿಗೆ ಬಂದು ಬೊಬ್ಬೆ ಹಾಕುತ್ತಿಲ್ಲ. ಆದರೆ ಲಸಿಕೆ ಪಡೆಯುವ ಸಲುವಾಗಿ ಬೆಳಿಗ್ಗೆ ಬೇಗ ಆಸ್ಪತ್ರೆಗೆ ಓಡುತ್ತಿದ್ದಾರೆ ಅಷ್ಟೆ.

ನನ್ನ ಪರಿಚಯದ 71 ವರ್ಷದ ಹಿರಿಯರು ದಾವಣಗೆರೆಯಲ್ಲಿ ಎರಡನೇ ಡೋಸ್ ಲಸಿಕೆಗಾಗಿ ಕಳೆದ ಐದು ದಿನಗಳಿಂದ ಮುಂಜಾವು 5 ಗಂಟೆಗೆ ಆಸ್ಪತ್ರೆಗೆ ತೆರಳಿ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಆದರೆ 9 ಗಂಟೆ ಹೊತ್ತಿಗೆ ‘ಲಸಿಕೆ ಇಂದು ಇಲ್ಲ, ಸ್ವಲ್ಪ ಇದೆ’ ಎಂದೆಲ್ಲ ಹೇಳಿ ಕಳುಹಿಸುತ್ತಿದ್ದಾರಂತೆ. ತಮ್ಮ ಅನುಭವವನ್ನು ಅವರು ಸ್ಥಳೀಯ ದಿನಪತ್ರಿಕೆಯಲ್ಲಿ ಹಂಚಿಕೊಂಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಆದರೂ ಅವರು ಛಲ ಬಿಡದ ತ್ರಿವಿಕ್ರಮನಂತೆ ದಿನವೂ ಲಸಿಕೆಗಾಗಿ ಆಸ್ಪತ್ರೆಗೆ ಎಡತಾಕುತ್ತಿದ್ದಾರೆ. 18-44 ವರ್ಷದವರಿಗೆ ಸರ್ಕಾರವು ಲಸಿಕೆಗೆ ದಿನಾಂಕ ನಿಗದಿಪಡಿಸಿ ಮಾಧ್ಯಮಗಳಲ್ಲಿ ಈ ಕುರಿತು ಘೋಷಿಸಿದರೂ ಪದೇ ಪದೇ ನಿಗದಿತ ದಿನಾಂಕವನ್ನು ಮುಂದೂಡುತ್ತಿರುವುದು ಯಾತಕ್ಕೆ? ವ್ಯವಸ್ಥಿತವಾಗಿ ಲಸಿಕೆ ಸರಬರಾಜು ಮತ್ತು ನೀಡಿಕೆ ಆಗಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ಲಸಿಕೆ ನೀಡಿಕೆ ಬಗ್ಗೆ ಸರ್ಕಾರ ಪದೇ ಪದೇ ‘ಬೊಬ್ಬೆ ಹಾಕಿದ್ದೇ’ ಇದಕ್ಕೆಲ್ಲಾ ಕಾರಣ. ಮೊದಲು ಸರ್ಕಾರದ ಕಡೆಯಿಂದ ಇಂತಹ ಬೊಬ್ಬೆ ನಿಲ್ಲಲಿ. ಸರ್ಕಾರದ ಈ ಬೊಬ್ಬೆಯೇ ಜನರ ಮೂಲಕ ಪ್ರತಿಧ್ವನಿಸುತ್ತಿದೆ ಎಂಬುದನ್ನು ಅರಿಯಲಿ. ವ್ಯವಸ್ಥೆ ಮೊದಲು ಸುಧಾರಿಸಲಿ.

–ನಿಖಿತಾ ಶಶಾಂಕ್ ಭಟ್, ಹೊಸನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.