ADVERTISEMENT

ಸಾರ್ವಜನಿಕ ಶಾಂತಿ ಕದಡುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 19:45 IST
Last Updated 13 ಡಿಸೆಂಬರ್ 2020, 19:45 IST

ರೈತ ಚಳವಳಿಯ ಕುರಿತು ಪ್ರಜಾವಾಣಿಯ ‘ಫ್ಯಾಕ್ಟ್ ಚೆಕ್’ ವಿಭಾಗದಲ್ಲಿ ಇತ್ತೀಚೆಗೆ ಪ್ರಸ್ತಾಪವಾದ ಸುಳ್ಳು ಸುದ್ದಿ ಕುರಿತ ಮಾಹಿತಿಯು ಮನಸ್ಸನ್ನು ತೀವ್ರವಾಗಿ ಕಲಕಿತು. ಮನುಷ್ಯರು ಇಷ್ಟು ಹೃದಯಹೀನರಾಗಿ, ಅಮಾನವೀಯವಾಗಿ ವರ್ತಿಸುತ್ತಾರೆ ಎಂದು ಕಲ್ಪಿಸಿಕೊಳ್ಳಲೂ ಅಸಾಧ್ಯ. ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಾ ಸಾವಿರಾರು ಕೃಷಿಕರು ಭಯಾನಕ ಚಳಿಯಲ್ಲಿ ಎರಡು ವಾರಗಳಿಂದ ದೆಹಲಿ ಗಡಿಯಲ್ಲಿ ಚಳವಳಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ನಾಲ್ಕು ವರ್ಷಗಳ ಹಿಂದೆ ಲಂಡನ್‍ನಲ್ಲಿ ಕೆಲವರು ಖಲಿಸ್ತಾನಕ್ಕೆ ಆಗ್ರಹಿಸಿ ಹೋರಾಡಿದಾಗ ನಡೆದ ಘಟನೆಯ ಚಿತ್ರವನ್ನು ಈಗ ನಡೆಯುತ್ತಿರುವ ಕೃಷಿಕರ ಚಳವಳಿಗೆ ಕೃತಕವಾಗಿ ಜೋಡಿಸಿ, ‘ಇದು ದೇಶದ್ರೋಹಕ್ಕೆ ಸಮ’ ಎಂಬ ಶೀರ್ಷಿಕೆಯೊಡನೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಘೋರ ಅಪರಾಧವಲ್ಲವೆ?

‘ಇಂತಹ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಸೂಕ್ತ ಕಾಯ್ದೆ ರೂಪಿಸಿ’ ಎಂದು ಇದೇ ವರ್ಷದ ಅಕ್ಟೋಬರ್‌ನಲ್ಲಿ
ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ ಅಂತಹ ಕಾಯ್ದೆಯನ್ನು ರೂಪಿಸಲು ಮೀನಮೇಷ ಎಣಿಸುತ್ತಿರುವ ಕೇಂದ್ರ, ಜನವರಿ ಮಧ್ಯಭಾಗದಲ್ಲಿ ಅದನ್ನು ಕಾರ್ಯಗತಗೊಳಿಸಬಹುದು ಎಂದು ತಿಳಿಸಿದೆ. ಆದರೆ, ಕಳೆದ ವಾರ, ಆ ವಿಷಯದ ಕುರಿತು ಅಟಾರ್ನಿ ಜನರಲ್ ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯಾವ ಯೋಚನೆಯೂ ಕೇಂದ್ರಕ್ಕಿಲ್ಲ’ ಎಂದೂ ನ್ಯಾಯಾಲಯಕ್ಕೆ ಹೇಳಿದ್ದಾರೆ. ಈ ನಿಲುವಿಗೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗುವುದಿಲ್ಲ.

ನಮ್ಮ ಸಂವಿಧಾನವು ‘ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ಒಪ್ಪಿಕೊಂಡಿಲ್ಲ. ಅದು ಈ ರಾಷ್ಟ್ರದ ಪ್ರಜೆಗಳಿಗೆ ಕೊಟ್ಟಿರುವುದು ‘ನಿಯಂತ್ರಿತ ಹಕ್ಕು’. ‘ಸಾರ್ವಜನಿಕ ಶಾಂತಿ ಕದಡುವ ಯಾವ ಬಗೆಯ ಅಭಿವ್ಯಕ್ತಿಗೂ ಸ್ವಾತಂತ್ರ್ಯವಿಲ್ಲ’ ಎಂಬುದು ಈ ನಿರ್ಬಂಧಗಳಲ್ಲಿ ಒಂದು. ಅಷ್ಟಾದರೂ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಅಸಾಂವಿಧಾನಿಕ ಮತ್ತು ಸಾರ್ವಜನಿಕ ಶಾಂತಿಯನ್ನು ಕದಡುವ ಪ್ರಯತ್ನವಲ್ಲವೇ?

ADVERTISEMENT

–ಡಾ. ಸಿ.ಎನ್.ರಾಮಚಂದ್ರನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.