ADVERTISEMENT

ತಾಳಗುಪ್ಪ ಎಕ್ಸ್‌ಪ್ರೆಸ್‌ನಲ್ಲಿ ದರೋಡೆಗೆ ನಿರ್ಲಕ್ಷ್ಯವೇ ಕಾರಣ!

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 4:41 IST
Last Updated 25 ಡಿಸೆಂಬರ್ 2018, 4:41 IST
   

ಡಿಸೆಂಬರ್ 20ರ ರಾತ್ರಿ ದರೋಡೆಗೆ ತುತ್ತಾದ ತಾಳಗುಪ್ಪ ಎಕ್ಸ್‌ಪ್ರೆಸ್‌ನ ಎಸ್–3 ಬೋಗಿಯಲ್ಲಿ ನಾನೂ ನನ್ನ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದೆ. ಅಂದು ರೌಡಿಗಳಂತೆ ವರ್ತಿಸಿದ ನಾಲ್ಕು ಮಂದಿ ಪರಸ್ಪರ ಜಗಳ ಆಡಿದಂತೆ ನಟಿಸುತ್ತ ಅತ್ತಿತ್ತ ಸುಳಿಯುತ್ತ ನಾವ್ಯಾರೂ ಎದ್ದೇಳದಂತೆ ತಡೆದಿದ್ದರು. ಅದೇ ಸಂದರ್ಭದಲ್ಲಿ ಅವರು ಎಸ್‌–1 ಮತ್ತು ಎಸ್–2 ಬೋಗಿಗಳಲ್ಲಿ ತಮ್ಮ ಸಹಚರರು ದರೋಡೆ ಮಾಡುವಂತೆ ನೋಡಿಕೊಂಡಿರಬಹುದು ಎಂಬುದು ನನ್ನ ಅನಿಸಿಕೆ.

ಈ ದರೋಡೆಯು ರೈಲ್ವೆ ಪೊಲೀಸರ ವಿಫಲತೆಯಿಂದಾಗಿಯೇ ನಡೆದಿದೆ. ಏಕೆಂದರೆ ಬೆಂಗಳೂರಿನಿಂದಲೇ ಅತಿಹೆಚ್ಚು ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಇಂಥ ರೈಲುಗಳನ್ನು ಮೈಸೂರಿಗೆ ವಿಸ್ತರಿಸಲಾಗಿದೆ. ಆದ್ದರಿಂದ ದೂರ ಪ್ರಯಾಣ ಮಾಡುವ ಕೆಲವೇ ಪ್ರಯಾಣಿಕರು ಮತ್ತು ಮೈಸೂರು- ಬೆಂಗಳೂರು ನಡುವಣ ನಿಯಮಿತ ರೈಲುಗಳಿಗಿಂತ ಹೆಚ್ಚು ಹಣ ಕೊಟ್ಟು ಹೋಗುವ ಪರಸ್ಥಳದವರೇ ಈ ರೈಲಿನಲ್ಲಿ ಹೆಚ್ಚಾಗಿರುತ್ತಾರೆ. ಇಂತಹ ರೈಲುಗಳಿಗೆ ಭದ್ರತೆ ಒದಗಿಸಬೇಕಾಗಿದ್ದುದು ರೈಲ್ವೆ ಪೊಲೀಸರ ಕರ್ತವ್ಯವಾಗಿತ್ತು.

ADVERTISEMENT

ಮೈಸೂರಿನಿಂದ ಹೊರಡುವ ಮೈಸೂರು- ಹೌರಾ ವೀಕ್ಲಿ ಎಕ್ಸ್‌ಪ್ರೆಸ್‌, ಮೈಸೂರು– ಅಜ್ಮೇರ್‌ ಎಕ್ಸ್‌ಪ್ರೆಸ್, ಹಂಪಿ ಎಕ್ಸ್‌ಪ್ರೆಸ್, ಮೈಸೂರು– ಚೆನ್ನೈ ಸೆಂಟ್ರಲ್‌ ವೀಕ್ಲಿ ಸೂಪರ್‌ ಫಾಸ್ಟ್, ಕಾವೇರಿ ಎಕ್ಸ್‌ಪ್ರೆಸ್, ಮೈಸೂರು– ರೇಣಿಗುಂಟ ಎಕ್ಸ್‌ಪ್ರೆಸ್ ರೈಲುಗಳಿಗೆ ಭದ್ರತೆ ಒದಗಿಸಬೇಕಾದ ಅಗತ್ಯ ಇದೆ.

ಅತ್ಯಂತ ಸುರಕ್ಷಿತ ಮಾರ್ಗ ಎಂದೇ ನಂಬಿದ್ದ ಮೈಸೂರು- ಬೆಂಗಳೂರು ರೈಲುಮಾರ್ಗದಲ್ಲಿಯೂ ದರೋಡೆ ನಡೆದಿರುವುದು ಈ ಭಾಗದ ಪ್ರಯಾಣಿಕರಿಗೆ ಆಘಾತ ಉಂಟುಮಾಡಿದೆ.

–ಬೇಳೂರು ಸುದರ್ಶನ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.