ADVERTISEMENT

ವಾಚಕರ ವಾಣಿ: ಕ್ರಮೇಣ ಕಡಿಮೆಯಾಗಲಿದೆ ವಿದ್ಯುತ್‌ ದರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 19:35 IST
Last Updated 28 ಜೂನ್ 2021, 19:35 IST

ವಿದ್ಯುತ್‌ ಖರೀದಿ ದರ ಕಡಿಮೆಯಾಗಿದ್ದರೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್‌ ದರ ಹೆಚ್ಚಿಸಿ ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿದೆ ಎಂದು ಮಲ್ಲಿಕಾರ್ಜುನ ಹೆಗ್ಗಳಗಿ ಆಕ್ಷೇಪಿಸಿದ್ದಾರೆ (ಸಂಗತ, ಜೂನ್‌ 26).

ಕರ್ನಾಟಕವು ಗ್ರಾಹಕರ ವಿದ್ಯುತ್‌ ಬೇಡಿಕೆ ಪೂರೈಸಲು ವಿದ್ಯುತ್‌ ಮಾರುಕಟ್ಟೆಯಿಂದ ವಿದ್ಯುತ್‌ ಖರೀದಿಸುತ್ತಿದೆ. 2018ರ ನಂತರ ಸೇರ್ಪಡೆಯಾದ ನವೀಕರಿಸಬಹುದಾದ ಇಂಧನದಿಂದಾಗಿ ವಿದ್ಯುತ್‌ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಲಾಗಿದೆ. ನವೀಕರಿಸಬಹುದಾದ ಇಂಧನವನ್ನು ಪೂರ್ಣವಾಗಿ ಬಳಸಲು ಇನ್ನಿತರ ಮೂಲದ ವಿದ್ಯುತ್‌ನ್ನು ಕಡಿತಗೊಳಿಸಿ, ಮೂಲ ಒಪ್ಪಂದಗಳ ಪ್ರಕಾರ ಅವುಗಳಿಗೆ ಸ್ಥಿರ ದರ ಪಾವತಿ ಮಾಡಲಾಗುತ್ತದೆ.

ಬೇಡಿಕೆ ನೀಗಲು ಶಾಖೋತ್ಪನ್ನ ಹಾಗೂ ಇನ್ನಿತರ ಮೂಲಗಳಿಂದ ಬಹು ಹಿಂದೆ ಮಾಡಿಕೊಂಡಿದ್ದ 25 ವರ್ಷಗಳಷ್ಟು ದೀರ್ಘಕಾಲದ ವಿದ್ಯುತ್‌ ಖರೀದಿ ಒಪ್ಪಂದದ ದರವು ಈಗಿನ ನವೀಕರಿಸಬಹುದಾದ ಮೂಲದ ಇಂಧನ ದರಕ್ಕೆ ಹೋಲಿಸಿದರೆ ಹೆಚ್ಚೆನಿಸುತ್ತದೆ. ನವೀಕರಿಸಬಹುದಾದ ಮೂಲದ ಇಂಧನದ ಪ್ರಸರಣಾ ಜಾಲದ ವಿಸ್ತರಣೆಗೆ ಅಧಿಕ ಬಂಡವಾಳ ಹೂಡಲಾಗಿದೆ. ಇದು ಆರಂಭಿಕ ಹಂತದಲ್ಲಿ ಅಧಿಕವೆನಿಸಿದರೂ ದೀರ್ಘಕಾಲದಲ್ಲಿ ಇದರಿಂದ ಬಹಳಷ್ಟು ಪ್ರಯೋಜನವಾಗಲಿದೆ.

ADVERTISEMENT

ದೀರ್ಘಕಾಲದ ವಿದ್ಯುತ್‌ ಖರೀದಿ ಒಪ್ಪಂದಗಳ ಅವಧಿ ಮುಗಿದ ಬಳಿಕ ಕಡಿಮೆ ದರದ ನವೀಕರಿಸಬಹುದಾದ ಇಂಧನ ಖರೀದಿಸಿದಲ್ಲಿ ಕ್ರಮೇಣವಾಗಿ ವಿದ್ಯುತ್‌ ದರ ಕಡಿಮೆಯಾಗಲಿದೆ. ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ವಿದ್ಯುತ್‌ ಪೂರೈಕೆಯನ್ನು ನಿಭಾಯಿಸಲು ಈ ಕ್ಷೇತ್ರದಲ್ಲಿಯ ಹೂಡಿಕೆ ಪ್ರಮಾಣ ನಿರಂತರವಾಗಿ ಇರಬೇಕಾಗಿರುತ್ತದೆ. ‌ವಿದ್ಯುತ್‌ ಸರಬರಾಜು ಕಂಪನಿಗಳು ₹ 1ರಿಂದ ₹ 1.5ರವರೆಗಿನ ದರ ಪರಿಷ್ಕರಣೆ ಕೇಳಿದ್ದರೂ ಗ್ರಾಹಕರ ಹಿತದೃಷ್ಟಿಯಿಂದ ಆಯೋಗವು ಸ್ವಲ್ಪ ಮಟ್ಟಿನ (ಅಂದರೆ ಪ್ರತೀ ಯೂನಿಟ್‌ಗೆ ಕೇವಲ 30 ಪೈಸೆ) ವಿದ್ಯುತ್‌ ದರಪರಿಷ್ಕರಣೆಯನ್ನು ಮಾಡಿದೆ.

-ಜಿ.ಕುಮಾರ್‌ ನಾಯಕ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.