ಉದ್ಯೋಗ ಸೃಷ್ಟಿಸುವುದಕ್ಕೆ ಒತ್ತು ನೀಡಿ
ರಾಜ್ಯದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆದ ವಿದ್ಯಾರ್ಥಿಗಳು ಶೈಕ್ಷಣಿಕ ಅರ್ಹತೆಗೆ ತಕ್ಕ ಕೆಲಸ ಸಿಗದೆ ನಿರಾಶರಾಗುತ್ತಿದ್ದಾರೆ. ರಾಜ್ಯ ಮಾತ್ರವಲ್ಲ, ದೇಶದಲ್ಲಿಯೇ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಿಂದ ನಿರಾಶಾದಾಯಕ ಸ್ಥಿತಿಯಿದೆ. ಉದ್ಯೋಗವು ಕೇವಲ ಆದಾಯದ ಮೂಲ ಮಾತ್ರವಲ್ಲ, ಅದು ಸಾಮಾಜಿಕ ಮನ್ನಣೆ ಮತ್ತು ಜೀವನಮಟ್ಟದೊಂದಿಗೂ ಸಂಬಂಧ ಹೊಂದಿದೆ. ನಿರುದ್ಯೋಗದ ಬಿಕ್ಕಟ್ಟು ಪರಿಹರಿಸಿ ಯುವಶಕ್ತಿಯನ್ನು ಬಳಸಿಕೊಳ್ಳಲು ಸರ್ಕಾರವು, ಖಾಲಿ ಹುದ್ದೆಗಳ ಭರ್ತಿಗೆ ಆದಷ್ಟು ಬೇಗ ಅಧಿಸೂಚನೆ ಹೊರಡಿಸಬೇಕಿದೆ.
–ಉದಯ ಮ. ಯಂಡಿಗೇರಿ, ಧಾರವಾಡ
ಸಾಮಾನ್ಯ ರೈಲನ್ನಾಗಿ ಪರಿವರ್ತಿಸಿ
ಸುಮಾರು ಆರು ವರ್ಷಗಳಿಂದ ವಿಜಯಪುರ–ಬಾಗಲಕೋಟೆ–ಕೊಪ್ಪಳ–ಹೊಸಪೇಟೆ ಮಾರ್ಗವಾಗಿ ಯಶವಂತಪುರದ ನಡುವೆ ರೈಲು (06545) ಸಂಚರಿಸುತ್ತಿದೆ. ಬಹು ಬೇಡಿಕೆಯಿರುವ ಈ ರೈಲು ಈಗಲೂ ಸಾಮಾನ್ಯ ರೈಲಾಗಿ ಸಂಚರಿಸದೆ, ವಿಶೇಷ ರೈಲಾಗಿಯೇ ಉಳಿದಿದೆ. ಇದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗಿದೆ. ಉತ್ತರ ಕರ್ನಾಟಕದ ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರನ್ನು ಆಶ್ರಯಿಸಿದ್ದಾರೆ. ನೌಕರರು, ವ್ಯಾಪಾರಸ್ಥರು, ರೋಗಿಗಳು ಬೆಂಗಳೂರಿಗೆ ಬಂದು ಹೋಗಲು ಈ ರೈಲು ಅನುಕೂಲಕರವಾಗಿದೆ. ಹಾಗಾಗಿ, ಇದನ್ನು ಎಕ್ಸ್‌ಪ್ರೆಸ್ ರೈಲು ಆಗಿ ಬದಲಾಯಿಸಿದರೆ ಅನುಕೂಲವಾಗಲಿದೆ.
–ಅಶೋಕ ಉಗಾರ, ವಿಜಯಪುರ
ಮೈಸೂರು ದಸರಾ ಅನುಕರಣೆ ಬೇಡ
ಇತ್ತೀಚೆಗೆ ಪ್ರತಿ ಜಿಲ್ಲೆಯಲ್ಲೂ ಮೈಸೂರು ದಸರಾದ ತದ್ರೂಪ ಸೃಷ್ಟಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಸ್ಪರ್ಧೆಗೆ ಬಿದ್ದವರಂತೆ ಸರ್ಕಾರಿ ದುಡ್ಡಿನಲ್ಲಿ ತರಹೇವಾರಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಮೈಸೂರು ದಸರಾ ಹೋಲುವಂತೆ ಮೈಸೂರಿನ ಆನೆ ಶಿಬಿರದಿಂದಲೇ ತುಮಕೂರಿಗೆ ಆನೆಗಳನ್ನು ಕರೆಸಿದ್ದು ಇದಕ್ಕೊಂದು ನಿದರ್ಶನ. ಮೈಸೂರು ದಸರಾಗೆ ಪಾರಂಪರಿಕ ಚರಿತ್ರೆ ಇದೆ. ಅದರ ಆಚರಣೆಗೂ ಅರ್ಥವಿದೆ. ಅದನ್ನೇ ಹೋಲುವ ನಕಲು ಸೃಷ್ಟಿಸಿ ಸರ್ಕಾರದ ದುಡ್ಡನ್ನು ಅಂದಾದುಂದಿ ಖರ್ಚು ಮಾಡುವ ಅಸಂಬದ್ಧ ಆಚರಣೆಗಳಿಗೂ, ಪಾರಂಪರಿಕ ಮೈಸೂರು ದಸರಾಕ್ಕೂ ಎತ್ತಣಿಂದೆತ್ತ ಸಂಬಂಧ? ಅದರ ಬದಲು ಆಯಾ ಜಿಲ್ಲೆಯ ಅಸ್ಮಿತೆ ಬಿಂಬಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬಹುದು.
⇒ವೇದಾಂತ್, ಬೆಂಗಳೂರು
ಆರೋಗ್ಯ ಸೇವೆಗೂ ಇಬ್ಬಗೆ ನೀತಿಯೆ?
ಸರ್ಕಾರಿ ನೌಕರರಿಗೆ ‘ಆರೋಗ್ಯ ಸಂಜೀವಿನಿ’ ಯೋಜನೆ ಜಾರಿಗೊಳಿಸಿರುವುದು ಸ್ವಾಗತಾರ್ಹ. ಜನನ ಪ್ರಮಾಣಪತ್ರದಿಂದ ಹಿಡಿದು ಸ್ವಚ್ಛತಾ ಕಾರ್ಯ, ಖಾತೆ, ರಸ್ತೆ, ಚರಂಡಿ, ಕುಡಿಯುವ ನೀರು ಪೂರೈಕೆ ಸೇರಿ ಮರಣ ಪ್ರಮಾಣಪತ್ರದವರೆಗೂ ಸೇವೆ ಒದಗಿಸುವಲ್ಲಿ ನಗರ ಸ್ಥಳೀಯ ಸಂಸ್ಥೆಯ ನೌಕರರ ಕೊಡುಗೆ ದೊಡ್ಡದಿದೆ. ಸರ್ಕಾರದಿಂದ ನಡೆಸುವ ವಿವಿಧ ಸಮೀಕ್ಷೆಗಳಲ್ಲೂ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ನೌಕರರು ಸೇವೆ ಸಲ್ಲಿಸುತ್ತಾರೆ. ಆದರೆ, ಈ ನೌಕರರಿಗೆ ಆರೋಗ್ಯ ಭಾಗ್ಯದ ಖಾತರಿ ಇಲ್ಲದಿರುವುದು ದುರದೃಷ್ಟಕರ.
–ನಯನ ಮಧು, ದೊಡ್ಡಬಳ್ಳಾಪುರ
ಎಂಜಲು ಬಳಕೆಗೆ ಕಡಿವಾಣ ಬೀಳಲಿ
ನಾವು ಸ್ವಚ್ಛತೆಯ ಮೂಲವನ್ನೇ ಮರೆತಿದ್ದೇವೆ. ಅನೇಕರು ಪಾಠ–ಪ್ರವಚನ ಮಾಡುವಾಗ ಪುಸ್ತಕ ಹಾಗೂ ಪಟ್ಟಿಯ ಹಾಳೆ ತಿರುಗಿಸಲು ಬೆರಳಿಂದ ಎಂಜಲು ತಾಗಿಸುವುದನ್ನು ನೋಡುತ್ತೇವೆ. ಪತ್ರಿಕೆ ಓದುವಾಗ, ಹಣ ಎಣಿಸುವಾಗ, ರಶೀದಿ ಕೊಡುವಾಗ, ಟಿಕೆಟ್ ನೀಡುವಾಗ, ಹೀಗೆ ಎಲ್ಲೆಂದರಲ್ಲಿ ಎಂಜಲು ಬಳಸುತ್ತೇವೆ. ಕವಳದ ತಲುಬು ಇರುವವರು ಹೀಗೆ ಮಾಡಿದರೆ ಇವಕ್ಕೆಲ್ಲಾ ಕೆಂಪು ಎಂಜಲು ಅಂಟಿಕೊಂಡು ಅಸಹ್ಯವಾಗುತ್ತದೆಯಲ್ಲದೆ, ರೋಗಗಳಿಗೂ ಕಾರಣವಾಗುತ್ತದೆ. ನ್ಯಾಯಾಲಯದ ಕಡತಗಳ ಪುಟಗಳನ್ನು ತಿರುಗಿಸಲು ಕೆಲ ಸಿಬ್ಬಂದಿ ಎಂಜಲು ಬಳಸಿದ್ದನ್ನು ಗಮನಿಸಿದ ಅಲಹಾಬಾದ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿ, ಮುಂದೆ ಹೀಗಾಗದಂತೆ ಎಚ್ಚರಿಕೆ ನೀಡಿರುವುದು ಸ್ವಾಗತಾರ್ಹ.
–ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ
ಕಸಾಪಗೆ ಆಡಳಿತಾಧಿಕಾರಿ ನೇಮಿಸಲಿ
ಎನ್. ಬಸವಾರಾಧ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಾನು ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದೆ. ಆಗ ಸಾಮಾನ್ಯ ಸಭೆಗಳು ಅನುಕೂಲಕರವಾದ ಸ್ಥಳದಲ್ಲಿ ನಡೆಯುವಂತೆ ನೋಡಿಕೊಳ್ಳಲಾಗು ತ್ತಿತ್ತು. ಕಾರ್ಯಕ್ರಮ ಆಯೋಜನೆ ಇತ್ಯಾದಿ ವಿಷಯಗಳು ಕಾರ್ಯಕಾರಿಣಿಯ ನಿರ್ಣಯಗಳಾಗಿರುತ್ತಿದ್ದವು; ಅಧ್ಯಕ್ಷರ ನಿರ್ಣಯಗಳಲ್ಲ. ಸದಸ್ಯರನ್ನು ಗೌರವದಿಂದ ಕಾಣುವುದು, ಕಾರ್ಯಕಾರಿಣಿ ನಿರ್ಣಯಕ್ಕೆ ಗೌರವ ಕೊಡುವುದು ಕಸಾಪ ಪದ್ಧತಿ. ಇದಕ್ಕೆ ಬದಲಾಗಿ, ಸದಸ್ಯರನ್ನು ಅಮಾನತುಗೊಳಿಸುವುದು, ಕಟುಶಬ್ದ ಬಳಸಿ ಮಾತನಾಡುವುದು ಸರಿಯಲ್ಲ. ಹಾಲಿ ಅಧ್ಯಕ್ಷರು ಪ್ರಾರಂಭದಿಂದಲೇ ಸಮಸ್ಯಾತ್ಮಕ ನಿರ್ಣಯಗಳ ಸುಳಿಯಲ್ಲಿ ಸಿಲುಕಿ ಪರಿಷತ್ತನ್ನು ಕೋರ್ಟ್ ಮೆಟ್ಟಿಲು ಹತ್ತಿಸಿ ಪ್ರಸಿದ್ಧಿ ಪಡೆದಿದ್ದಾರೆ. ಅವರು ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದು ಪರಿಷತ್ತಿನ ಗೌರವ ಉಳಿಸಲಿ. ಸರ್ಕಾರವು ಆಡಳಿತಾಧಿಕಾರಿಯನ್ನು ನೇಮಿಸಿ ಸಮ್ಮೇಳನ ನಡೆಸಲಿ.
–ಕೆ.ಬಿ. ಬ್ಯಾಳಿ, ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.