ADVERTISEMENT

ವಾಚಕರ ವಾಣಿ: ಕ್ರೀಡಾ ಸಂಸ್ಥೆಗಳಿಂದ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 19:31 IST
Last Updated 9 ಜೂನ್ 2022, 19:31 IST

‘ಭಾರತದ ಕ್ರೀಡೆಗೆ ಹಿತಾಸಕ್ತಿ ಸಂಘರ್ಷ ಎಂಬುದು ದೊಡ್ಡ ಶಾಪ’ ಎಂಬ, ನಿವೃತ್ತ ನ್ಯಾಯಮೂರ್ತಿ ಹಾಗೂ ಭಾರತ ಟೇಬಲ್‌ ಟೆನಿಸ್‌ ಫೆಡರೇಷನ್‌ನಲ್ಲಿ ಆಡಳಿತ ಸುಧಾರಣೆ ಮತ್ತು ರಾಷ್ಟ್ರೀಯ ಕ್ರೀಡಾ ನೀತಿಯನ್ನು ಜಾರಿಗೊಳಿಸಲು ದೆಹಲಿ ಹೈಕೋರ್ಟ್‌ ನೇಮಕ ಮಾಡಿರುವ ಆಡಳಿತ ಸಮಿತಿ (ಸಿಒಎ) ಮುಖ್ಯಸ್ಥೆ ಗೀತಾ ಮಿತ್ತಲ್ ಅವರ ಮಾತು ಕ್ರೀಡಾ ಕ್ಷೇತ್ರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬೆರಳು ಮಾಡಿ ತೋರಿಸುವಂತಿದೆ. ‘ಕ್ರೀಡೆಯೊಳಗಣ ಪೀಡೆಗೆ ಪರಿಹಾರ ಸಿಒಎ’ ಎಂಬ ಗಿರೀಶ್ ದೊಡ್ಡಮನಿ ಅವರ ಲೇಖನವೂ (ಪ್ರ.ವಾ., ಜೂನ್‌ 8) ಫೆಡರೇಷನ್‌ಗಳ ಜವಾಬ್ದಾರಿಯನ್ನು ಪೂರಕವಾಗಿ ನೆನಪಿಸುವಂತಿದೆ.

ಫುಟ್‌ಬಾಲ್ ಹಾಗೂ ಹಾಕಿ ಫೆಡರೇಷನ್‌ಗಳಲ್ಲಿ ನಡೆದ ಅವಾಂತರಗಳನ್ನು ಗಮನಿಸಿದ ನ್ಯಾಯಾಲಯವು ಫೆಡರೇಷನ್‌ಗಳ ನಿರ್ಲಜ್ಜ ನಿಯಮಗಳಿಗೆ ಕಡಿವಾಣ ಹಾಕಲು ಸಿಒಎ ನೇಮಿಸಬೇಕಾಯಿತು. ಯಾವುದೇ ಮೂಲ ಸೌಲಭ್ಯಗಳಿಲ್ಲದ ಕುಗ್ರಾಮಗಳ ಅಥವಾ ಪಟ್ಟಣ ಪ್ರದೇಶದ ಪ್ರತಿಭೆಗಳನ್ನು ಹೆಕ್ಕಿ ತೆಗೆದು, ನಿರ್ಲಕ್ಷಿತ ಕ್ರೀಡಾ ಕ್ಷೇತ್ರವನ್ನು ಪೋಷಿಸಬೇಕಾದ ಕ್ರೀಡಾ ಸಂಸ್ಥೆಗಳು ಸ್ವಜನಪಕ್ಷಪಾತ, ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿವೆ. ಈ ಮೂಲಕ ಕ್ರೀಡಾ ಕ್ಷೇತ್ರದ ಮೇಲೆ ಚಪ್ಪಡಿ ಎಳೆಯಲು ಹೊರಟಿವೆ. ಪ್ರಧಾನ ಮಂತ್ರಿ ಅವರ ‘ಖೇಲೊ ಇಂಡಿಯಾ’ ಕನಸು ಸಾಕಾರಗೊಳ್ಳಬೇಕಾದರೆ, ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಪ್ರತಿಭೆಗಳನ್ನು ಮಾತ್ರ ಫೆಡರೇಷನ್‌ಗಳಿಗೆ ಆಯ್ಕೆ ಮಾಡಬೇಕಾಗಿದೆ. ಹಾಗಾದಾಗ ಮಾತ್ರ ಕ್ರೀಡೆಯ ಅಭಿವೃದ್ಧಿ ಸಾಧ್ಯ.

–ಚಿ.ಉಮಾ ಶಂಕರ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.