ADVERTISEMENT

ಪರಿಸರದ ಪಾಠವಾಗಲಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2018, 17:32 IST
Last Updated 24 ಜೂನ್ 2018, 17:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಸ್ಥಳೀಯ ಜಲಸಂಪನ್ಮೂಲ ಬಳಕೆಯೇ ಆದ್ಯತೆಯಾಗಲಿ’ (ಪ್ರ.ವಾ., ಜೂನ್ 22) ಸಂಪಾದಕೀಯವು ಲಿಂಗನಮಕ್ಕಿ ಯೋಜನೆಯ ಕುರಿತು ಸರ್ಕಾರಕ್ಕೆ ಬೀಸಿದ ಚಾಟಿಯೇಟಿನಂತಿದೆ. ಇದು ಜನರ ಅಭಿಪ್ರಾಯವೂ ಹೌದು.

ಕುಡಿಯುವ ನೀರು, ಮೂಲ ಸೌಕರ್ಯಗಳನ್ನು ಒದಗಿಸುವ ನೆಪದಲ್ಲಿ ಸರ್ಕಾರವು ಪರಿಸರವನ್ನು ನಿರ್ಲಕ್ಷಿಸುವುದು ಎದ್ದು ಕಾಣುತ್ತಿದೆ. ಇಂತಹ ದುಡುಕಿನ ನಿರ್ಧಾರಗಳಿಂದ ಜನವಿರೋಧಿ ಅಲೆಯನ್ನು ಸರ್ಕಾರ ಎದುರಿಸುತ್ತಿರುವುದು ಇದೇ ಮೊದಲ ಸಲವಲ್ಲ. ಬೆಂಗಳೂರಿನಲ್ಲಿ ಕಟ್ಟಲು ಉದ್ದೇಶಿಸಿದ್ದ ಉಕ್ಕಿನ ಸೇತುವೆಯಾಗಲಿ, ಕಾರ್ಯಗತವಾಗುತ್ತಿರುವ ಎತ್ತಿನಹೊಳೆ ಯೋಜನೆಯಾಗಲಿ, ಈಗಿನ ಲಿಂಗನಮಕ್ಕಿ ಪ್ರಸ್ತಾವವಾಗಲಿ ಎಲ್ಲವೂ ವಸ್ತುಸ್ಥಿತಿಯನ್ನು ಅರಿಯದ, ದೂರದೃಷ್ಟಿಯಿಲ್ಲದ ಬಾಲಿಶ ಚಿಂತನೆಗಳಾಗಿವೆ.

ಈ ಯೋಜನೆ ಕಾರ್ಯಗತವಾದಲ್ಲಿ ನಾಶವಾಗುವ ಅರಣ್ಯ ಪ್ರದೇಶ, ಜೀವವೈವಿಧ್ಯ, ಸಂತ್ರಸ್ತರಾಗುವ ಜನ ಎಲ್ಲದರ ಬಗ್ಗೆ ಪ್ರಭುತ್ವ ಕುರುಡಾಗಿರುವುದು ದುರ್ದೈವ. ಬೆಂಗಳೂರಿನ ನೀರಿನ ಬವಣೆಯನ್ನು ನೀಗಿಸಲು ಕಡಿಮೆ ಖರ್ಚಿನ ಸಾಕಷ್ಟು ದಾರಿಗಳಿವೆ. ಆದರೂ ದೂರದ ದಾರಿಯ ಕಡೆ ದೃಷ್ಟಿ ಹರಿದಾಗ ಅದರ ಹಿಂದಿರುವ ದುರುದ್ದೇಶ ಅರ್ಥವಾಗುವಂಥದ್ದೇ.

ADVERTISEMENT

ಪ್ರಜೆಗಳಿಂದ ಚುನಾಯಿತರಾದ ರಾಜಕಾರಣಿಗಳಿಗೆ ಸಾರ್ವಜನಿಕ ಅಭಿಪ್ರಾಯವನ್ನು ಕೇಳುವ ಕಿವಿಯಿರಬೇಕು. ಕಾರ್ಯಗತವಾಗುವ ಯೋಜನೆಗಳು ಎಲ್ಲ ರೀತಿಯಿಂದಲೂ ಸಕಾರಾತ್ಮಕವಾಗಿರುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು. ನಾಗರಿಕರ ವಿರೋಧ ವ್ಯಕ್ತವಾದರೆ ಅಲ್ಲಿ ಎಲ್ಲವೂ ಸರಿಯಿಲ್ಲ ಎಂದರ್ಥ. ಇಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಸರ್ಕಾರದ ಕರ್ತವ್ಯ. ಎಲ್ಲಕ್ಕಿಂತಲೂ ಮೊದಲು ರಾಜಕಾರಣಿಗಳಿಗೆ, ಸಂಬಂಧಿತ ಅಧಿಕಾರಿಗಳಿಗೆ ಪ್ರಕೃತಿ- ಪರಿಸರದ ಪಾಠವಾಗಬೇಕು.

ಧರ್ಮಾನಂದ ಶಿರ್ವ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.