ADVERTISEMENT

ಗಾಂಧೀಜಿ ಎಂಬ ರೂಪಕ...

ಶೂದ್ರ ಶ್ರೀನಿವಾಸ್
Published 18 ಫೆಬ್ರುವರಿ 2019, 20:15 IST
Last Updated 18 ಫೆಬ್ರುವರಿ 2019, 20:15 IST

‘ಗಾಂಧಿ ಎನ್ನುವ ಕನ್ನಡಿ ತುಂಡಾಗಿದೆ’ ಎಂದುಕೆ.ವಿ. ಅಕ್ಷರ ಹೇಳಿದ್ದಾರೆ (ಪ್ರ.ವಾ., ಫೆ. 18). ಇದರಿಂದ ಅಕ್ಷರ ಅವರು ಗಾಂಧಿಯವರ ಚಿಂತನೆಗಳನ್ನು ಯಾವ ರೀತಿಯಲ್ಲಿ ಗ್ರಹಿಸಿದ್ದಾರೆ ಎಂದು ಗೊಂದಲಕ್ಕೀಡಾದೆ. ‘ಎಲ್ಲಾ ಊರುಗಳಲ್ಲಿ ಅದರ ತುಂಡುಗಳಿವೆ’ ಎಂದು ಒಗಟಿನ ರೂಪದಲ್ಲಿ ಅವರು ಹೇಳಿಬಿಟ್ಟಿದ್ದಾರೆ. ಆದರೆ, ನಾವು ಇಲ್ಲಿ ಗಮನಿಸಬೇಕಾಗಿರುವುದು, ಆಮಹಾತ್ಮ ಯಾವುದನ್ನೇ ಆಗಲಿ ಇದೇ ಅಂತಿಮವಾದದ್ದು ಎಂದು ಹುಂಬತನದಿಂದ ಹೇಳಿದವರಲ್ಲ ಎನ್ನುವುದನ್ನು. ಎಲ್ಲಾ ಸಾಮಾಜಿಕ ದುಃಖ ದುಮ್ಮಾನಗಳನ್ನು, ರಾಜಕೀಯ ಏರುಪೇರುಗಳನ್ನು ಅವಲೋಕಿಸಿಕೊಳ್ಳುತ್ತಲೇ, ಇತಿಹಾಸದುದ್ದಕ್ಕೂ ಇವು ಯಾಕೆ ನಿರಂತರ ಘಟಿಸುತ್ತವೆ ಎಂದು ಮುಖಾಮುಖಿ
ಯಾದವರು. ಅದರ ಆಂತರಿಕ ಸೂಕ್ಷ್ಮಗಳನ್ನು ಅರಿಯಲು ಪ್ರಯತ್ನಿಸಿದವರು. ಯಾವುದೇ ಹಂತದಲ್ಲೂ ಪ್ರವಾದಿಯಂತೆ ವರ್ತಿಸಿದವರಲ್ಲ. ‘ಹಿಂದ್ ಸ್ವರಾಜ್’ದಂಥ ಮಹೋನ್ನತ ಕೃತಿಯಿಂದ ಮೊದಲ್ಗೊಂಡು ಇತರ ಬರವಣಿಗೆಯವರೆಗೆ ಇದು ಹೀಗೆಯೇ ಎಂದು ಸೂಚಿಸಿದವರಲ್ಲ. ಆದ್ದರಿಂದಲೇ ಅವರು ಸಾರ್ವಕಾಲಿಕವಾಗಿ ಕಾಣುವುದು. ಇಲ್ಲಿ ಪ್ರಸ್ತುತ ಎಂಬ ಕ್ಲೀಷೆಯ ಶಬ್ದವು ಅನಗತ್ಯ ಅನ್ನಿಸುತ್ತದೆ. ಗಾಂಧೀಜಿ ಸ್ವಾತಂತ್ರ್ಯಕ್ಕೂ ಮುನ್ನ ಮತ್ತು ಸ್ವಾತಂತ್ರ್ಯದ ನಂತರವೂ ಪರಿಣಾಮಕಾರಿಯಾಗಿಯೇ ಇದ್ದಾರೆ.

ನಮ್ಮ ಎಲ್ಲಾ ಸಾಮಾಜಿಕ ಬದಲಾವಣೆಗಳಲ್ಲೂ ಅದನ್ನು ಗುರುತಿಸಬಹುದು. ಗಾಂಧೀಜಿ ಚಿಂತನೆಗಳಿಂದ ಪ್ರಣೀತಗೊಂಡ ಸುಂದರಲಾಲ್ ಬಹುಗುಣ, ಬಾಬಾ ಆಮ್ಟೆ,‌ ಮೇಧಾ ಪಾಟ್ಕರ್, ಅಣ್ಣಾ ಹಜಾರೆ, ವಂದನಾ ಶಿವ, ವಿನೋಬಾಜಿ ಮುಂತಾದವರು ನಿಜ ಅರ್ಥದಲ್ಲಿ ವಿರೋಧ ಪಕ್ಷದ ನಾಯಕರಂತೆ ದುಡಿಯುತ್ತಿದ್ದಾರೆ. ಇದನ್ನು ಸೃಜನಾತ್ಮಕ ಚಲನಶೀಲತೆ ಎಂದು ಭಾವಿಸುವೆ.

‌‘ಹಿಂದ್ ಸ್ವರಾಜ್’ಹಾಸ್ಯಾಸ್ಪದವಾಗಿಲ್ಲ. ಚಿಂತಕಿ ರಜನಿ ಭಕ್ಷಿಯವರು ಗಾಂಧೀಜಿಕುರಿತ ತಮ್ಮ ಕೃತಿಯಲ್ಲಿ ಒಂದು ಮಾತು ಹೇಳಿದ್ದಾರೆ: ‘ಪ್ರತಿದಿವಸ ಜಗತ್ತಿನ ಒಂದಲ್ಲ ಒಂದು ಭಾಷೆಯಲ್ಲಿ ಗಾಂಧಿಯವರನ್ನು ಕುರಿತು ಒಂದು ಕೃತಿ ಹುಟ್ಟಿಕೊಳ್ಳುತ್ತಿದೆ’ ಎಂದು. ಆದ್ದರಿಂದ ಗಾಂಧಿಯವರನ್ನು ‘ಪ್ರಸ್ತುತ ಮತ್ತು ಅಪ್ರಸ್ತುತ’ ಎಂಬ ಎರಡು ನುಡಿಗಟ್ಟುಗಳಿಂದ ದೂರವಿಟ್ಟು ಚಿಂತಿಸಬೇಕಾಗಿದೆ ಅನ್ನಿಸುತ್ತದೆ.

ADVERTISEMENT

ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.