ADVERTISEMENT

ತೆರಿಗೆ ಹಣಕ್ಕೆ ಬಡ್ಡಿ ತೆರುವ ಜನ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಅಕ್ಟೋಬರ್ 2020, 17:55 IST
Last Updated 5 ಅಕ್ಟೋಬರ್ 2020, 17:55 IST

ಕೇಂದ್ರ ಸರ್ಕಾರವು ರಾಜ್ಯಗಳ ಜಿಎಸ್‌ಟಿ ತೆರಿಗೆಯ ಪಾಲನ್ನು ಕೊಡುವ ಬದಲು, ರಾಜ್ಯ ಸರ್ಕಾರಗಳೇ ರಿಸರ್ವ್ ಬ್ಯಾಂಕ್ ಮತ್ತು ಜಾಗತಿಕ ಬ್ಯಾಂಕುಗಳಿಂದ ಸಾಲ ಪಡೆದು ಆಯಾ ರಾಜ್ಯದ ಆರ್ಥಿಕ ಹೊರೆಯನ್ನು ನಿಭಾಯಿಸಬೇಕೆಂದು ಹೇಳಿರುವುದಾಗಿ ವರದಿಯಾಗಿದೆ. ಕೆಲವು ರಾಜ್ಯಗಳು ಕೇಂದ್ರವೇ ಸಾಲ ಮಾಡಿ ತಮ್ಮ ಪಾಲಿನ ಜಿಎಸ್‌ಟಿ ಹಣವನ್ನು ಕೊಡಬೇಕೆಂದೂ ಆಗ್ರಹಿಸಿವೆ. ಕೇಂದ್ರ ಸರ್ಕಾರವಾಗಲೀ ರಾಜ್ಯ ಸರ್ಕಾರಗಳಾಗಲೀ ಯಾವ ಕಾರಣಕ್ಕೆ ಎಲ್ಲಿಂದಲೇ ಸಾಲ ಪಡೆದರೂ ಅದನ್ನು ಬಡ್ಡಿಸಹಿತ ಮರುಪಾವತಿಸುವವರು ಜನರೇ ಹೊರತು ಯಾವ ಸರ್ಕಾರದ ಅಧಿಕಾರಿಯಾಗಲೀ ಮಂತ್ರಿಯಾಗಲೀ ಅಲ್ಲ. ಹೀಗಿರುವಾಗ, ಈಗಾಗಲೇ ಜನರಿಂದ ಸರ್ಕಾರಗಳಿಗೆ ಪಾವತಿಯಾಗಿರುವ ಜಿಎಸ್‌ಟಿಯ ರಾಜ್ಯಗಳ ಪಾಲನ್ನು ಹೊಸ ಸಾಲಗಳ ಮೂಲಕ ತುಂಬಿಸಿಕೊಳ್ಳುವುದೆಂದರೆ, ಒಂದು ಸಲ ಪಾವತಿಯಾಗಿರುವ ಜಿಎಸ್‌ಟಿಯನ್ನು ಮತ್ತೆ ಎರಡನೆಯ ಬಾರಿ ಜನರಿಂದ ವಸೂಲು ಮಾಡಿದಂತೆಯೇ ಆಗುತ್ತದೆ. ಅಷ್ಟೇ ಅಲ್ಲ, ಜನರು ತಾವೇ ಕಟ್ಟಿದ ತೆರಿಗೆ ಹಣಕ್ಕೆ ತಾವೇ ಕೋಟ್ಯಂತರ ರೂಪಾಯಿಯ ಬಡ್ಡಿಯನ್ನೂ ವೃಥಾ ತೆರಬೇಕಾಗುತ್ತದೆ. ಸರ್ಕಾರಗಳು ಜನರ ಬದುಕಿನ ಸಂಘಟನೆಗಾಗಿ ರೂಪುಗೊಂಡ ಆಡಳಿತ ಸಂಸ್ಥೆಗಳೇ ವಿನಾ ಜನರ ಹೆಸರಿನಲ್ಲಿ ವ್ಯವಹಾರ ಮಾಡಿ ಲಾಭ-ನಷ್ಟಗಳನ್ನು ಅನುಭವಿಸುವ ವ್ಯಾಪಾರಿ ಸಂಸ್ಥೆಗಳಲ್ಲ.

- ವಿ.ಎನ್.ಲಕ್ಷ್ಮೀನಾರಾಯಣ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT