ADVERTISEMENT

ವಾಚಕರ ವಾಣಿ | ಸಮಸ್ಯೆಗಳ ಮೂಲ ಮನಗಾಣಬೇಕು

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 19:38 IST
Last Updated 17 ಜನವರಿ 2023, 19:38 IST

ಬುಡಕಟ್ಟು ಸಮುದಾಯದ ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರುವುದನ್ನು ಉತ್ತೇಜಿಸಲು ಸಿಕ್ಕಿಂ ರಾಜ್ಯದ ಮುಖ್ಯಮಂತ್ರಿ ಪ್ರೋತ್ಸಾಹಧನ ಘೋಷಿಸಿದ್ದಾರೆ ಎಂಬುದಾಗಿ ವರದಿಯಾಗಿದೆ (ಪ್ರ.ವಾ., ಜ. 17). ಈ ಹಿಂದೆ, ಹಿಂದೂ ಮಹಿಳೆಯರು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವಂತೆ, ಸಂಸಾರ ಪರಿತ್ಯಾಗಿಗಳಾದ ಹಿಂದೂ ಸಾಧು-ಸಂತರು ಕರೆ ಕೊಟ್ಟಿದ್ದು ವರದಿಯಾಗಿತ್ತು. ಕೆಲವರಿಗೆ ತಮ್ಮ ಬುಡಕಟ್ಟಿನ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಧಾವಂತವಿದ್ದರೆ, ಇನ್ನು ಕೆಲವರಿಗೆ ತಮ್ಮ ಧರ್ಮದ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಆತುರ.

ಇನ್ನು ಕೆಲವೇ ವರ್ಷಗಳಲ್ಲಿ ಭಾರತವು ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕುವ ವರದಿಗಳು ಪ್ರಕಟವಾಗಿವೆ. ಜನರಿಗೆ ಆಹಾರ, ನೀರು, ಉದ್ಯೋಗ, ವಸತಿ, ಶಿಕ್ಷಣ, ವೈದ್ಯಕೀಯ ಸೌಲಭ್ಯದಂತಹ ಜೀವನ ಅವಶ್ಯಕ ಅಗತ್ಯಗಳನ್ನು ಪೂರೈಸಲು ಸರ್ಕಾರ ಪರದಾಡುತ್ತಿರುವಾಗ, ಹೆಚ್ಚು ಮಕ್ಕಳನ್ನು ಹೆರುವಂತೆ ಕರೆ ಕೊಡುವ ಅಗತ್ಯ ಖಂಡಿತ ಇಲ್ಲ. ಎಲ್ಲ ಸಮಸ್ಯೆಗಳ ಮೂಲ ಕಾರಣ ಜನಸಂಖ್ಯೆಯ ಹೆಚ್ಚಳ ಎಂಬುದನ್ನು ಮನಗಂಡು, ಬಹಳ ಹಿಂದಿನಿಂದಲೇ, ‘ಚಿಕ್ಕ ಸಂಸಾರ ಸುಖಿ ಸಂಸಾರ’ ಎಂಬ ಘೋಷವಾಕ್ಯವನ್ನು ಮುಂದಿಟ್ಟು, ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿಯನ್ನು ಖರ್ಚು ಮಾಡುತ್ತಿದೆ. ಹೀಗಿರುವಾಗ, ಈಗ ಇಂತಹ ಕರೆ ಕೊಡುವುದು ಅಥವಾ ಪ್ರೋತ್ಸಾಹಧನ ಘೋಷಿಸುವುದು ಒಂದು ಅಪರಾಧವೇ ಸರಿ. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಒಂದು ‘ಸಮಗ್ರ ರಾಷ್ಟ್ರೀಯ ಜನಸಂಖ್ಯಾ ನೀತಿ’ಯನ್ನು ರೂಪಿಸಿ, ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ.
ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT