ADVERTISEMENT

ವಾಚಕರ ವಾಣಿ | ಪರೀಕ್ಷೆಗಳ ದಿನಾಂಕ: ಘರ್ಷಣೆ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 3:54 IST
Last Updated 18 ಮಾರ್ಚ್ 2022, 3:54 IST

ದೇಶದಾದ್ಯಂತ ಹನ್ನೆರಡನೇ ತರಗತಿಯ ಪರೀಕ್ಷೆಗಳು ಮೊದಲೇ ನಿಗದಿಯಾಗಿ ಇನ್ನೇನು ಪ್ರಾರಂಭವಾಗಲಿವೆ. ವೃತ್ತಿನಿರತ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯ ದಿನಾಂಕಗಳೂ ಒಂದರ ಹಿಂದೊಂದು ಪ್ರಕಟಗೊಳ್ಳುತ್ತಿವೆ ಮತ್ತು ಒಂದಕ್ಕೊಂದು ಕ್ಲ್ಯಾಶ್ ಆಗುತ್ತಿವೆ. ರಾಜ್ಯದ ಖಾಸಗಿ ಎಂಜಿನಿಯರಿಂಗ್ ಕಾಲೇಜು ಮತ್ತು ವಿಶ್ವವಿದ್ಯಾಲಯ ಗಳ ವಿವಿಧ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಮೆಡ್-ಕೆ ಪರೀಕ್ಷೆ ಜೂನ್ 19ಕ್ಕೆ ನಡೆಯಲಿದೆ. ಆದರೆ ಅದೇ ದಿನ ನ್ಯಾಷನಲ್ ಲಾ ಯೂನಿವರ್ಸಿಟಿಯ ಪ್ರವೇಶ ಪರೀಕ್ಷೆ ಕ್ಲಾಟ್– ಕಾಮನ್ ಲಾ ಅಡ್ಮಿಶನ್ ಟೆಸ್ಟ್ ಕೂಡಾ ನಿಗದಿಯಾಗಿದೆ. ದ್ವಿತೀಯ ಪಿಯು ನಂತರ ಎರಡೂ ಪ್ರವೇಶ ಪರೀಕ್ಷೆಗಳನ್ನು ಬರೆಯಬೇಕೆನ್ನುವ ವಿದ್ಯಾರ್ಥಿಗಳಿಗೆ ಇದರಿಂದ ತೀವ್ರ ತೊಂದರೆಯಾಗಲಿದೆ.

ಕೆಲವು ವಾರಗಳ ಹಿಂದೆ ರಾಜ್ಯದ ದ್ವಿತೀಯ ಪಿಯು ಪರೀಕ್ಷೆಗಳು ಏಪ್ರಿಲ್ 16ರಿಂದ ಪ್ರಾರಂಭವಾಗುತ್ತವೆ ಎಂದು ಪ್ರಕಟಿಸಲಾಗಿತ್ತು. ಅದೇ ದಿನ ರಾಷ್ಟ್ರಮಟ್ಟದ ಜೆಇಇ ಪರೀಕ್ಷೆ ನಡೆಯುತ್ತದೆ ಎಂಬ ಪ್ರಕಟಣೆ ಹೊರಬಿದ್ದಿತು. ಆಗ ರಾಷ್ಟ್ರಮಟ್ಟದ ಪರೀಕ್ಷೆಗೆ ದಾರಿ ಮಾಡಿಕೊಡಲು, ರಾಜ್ಯದ ಪಿಯು ಪರೀಕ್ಷೆಗಳನ್ನು ಮುಂದೂಡಿ ಏಪ್ರಿಲ್ 22ಕ್ಕೆ ನಿಗದಿ ಮಾಡಲಾಯಿತು. ಈಗ ಜೆಇಇ ಪರೀಕ್ಷೆ ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮತ್ತೊಮ್ಮೆ ಪರೀಕ್ಷೆ ಮುಂದೂಡಿ ಏಪ್ರಿಲ್ 21ಕ್ಕೆ ಪ್ರಾರಂಭಿಸಲು ನಿರ್ಧರಿಸಿದೆ. ಪಿಯು ಪರೀಕ್ಷೆಗಳು ಮತ್ತೆ ಮುಂದಕ್ಕೆ ಹೋಗಬಹುದು ಎಂಬ ಆತಂಕ ವಿದ್ಯಾರ್ಥಿಗಳಿಗೆ ಎದುರಾಗಿದೆ. ಹೀಗೆ ಪದೇ ಪದೇ ದಿನಾಂಕಗಳು ಬದಲಾದರೆ ವಿದ್ಯಾರ್ಥಿಗಳು ಗೊಂದಲಕ್ಕೆ ಬೀಳುವುದಿಲ್ಲವೇ? ಪರೀಕ್ಷೆ ನಡೆಸುವ ಸಂಸ್ಥೆಗಳು, ಸರ್ಕಾರದ ಇಲಾಖೆಗಳು ವಿವಿಧ ಪರೀಕ್ಷೆಗಳ ದಿನಾಂಕಗಳು ಒಂದೇ ಸಮಯದಲ್ಲಿ ಬಾರದಂತೆ ನಿಗದಿ ಮಾಡಲು ಅನುಕೂಲವಾಗುವ ಡೇಟಾಪೂಲ್ (ದತ್ತಾಂಶ ಕಣಜ) ಹೊಂದಿದ್ದರೆ ಇಂಥ ಅವಾಂತರ ತಪ್ಪಿಸಬಹುದಲ್ಲವೇ?

- ಗುರುರಾಜ್ ಎಸ್. ದಾವಣಗೆರೆ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.