ADVERTISEMENT

ವಾಚಕರ ವಾಣಿ: ಅಸಹಿಷ್ಣುತೆ ವ್ಯಾಧಿಗೆ ಮದ್ದುಂಟೇ?

ವಾಚಕರ ವಾಣಿ
Published 5 ಆಗಸ್ಟ್ 2025, 22:30 IST
Last Updated 5 ಆಗಸ್ಟ್ 2025, 22:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಅಸಹಿಷ್ಣುತೆ ವ್ಯಾಧಿಗೆ ಮದ್ದುಂಟೇ? 

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯಲ್ಲಿ ಕೀಟನಾಶಕ ಸೇವಿಸಿ 20 ನವಿಲುಗಳು ಮೃತಪಟ್ಟಿರುವ ಸುದ್ದಿ ಓದಿ ಮನಸ್ಸು ಕದಡಿಹೋಯಿತು. ಕೆಲವು ದಿನಗಳ ಹಿಂದೆ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ತಾಯಿ ಹುಲಿ ಹಾಗೂ ಅದರ ನಾಲ್ಕು ಮರಿಗಳನ್ನು ಇದೇ ರೀತಿ ವಿಷವಿಟ್ಟು ಕೊಲ್ಲಲಾಗಿತ್ತು. ವನ್ಯಜೀವಿಗಳ ಇಂತಹ ದಾರುಣ ಸಾವಿಗೆ ಮನುಷ್ಯನಲ್ಲದೆ ಇನ್ನಾರೂ ಕಾರಣರಲ್ಲ. ಈ ಕೃತ್ಯಗಳಿಗೆ ಅರಣ್ಯ ಇಲಾಖೆಯ ನಿಷ್ಕ್ರಿಯತೆಯೂ ಕೊಡುಗೆ ನೀಡಿದೆ.

ಇತ್ತೀಚೆಗೆ ಸಮಾಜದಲ್ಲಿ ಅಸಹಿಷ್ಣುತೆಯ ರೋಗ ಉಲ್ಬಣಿಸುತ್ತಿದೆ. ಅನ್ಯಧರ್ಮೀಯ ಶಿಕ್ಷಕನನ್ನು ಶಾಲೆಯಿಂದ ಹೊರಹಾಕಲು ಮಕ್ಕಳ ಮೂಲಕ ಕುಡಿಯುವ ನೀರಿಗೆ ವಿಷ ಬೆರೆಸುವುದು, ದಲಿತರು ಕುಡಿಯುವ ನೀರಿನ ಟ್ಯಾಂಕಿಗೆ ಮಲ ಬೆರೆಸುವುದು, ಇವೆಲ್ಲ ಸಂಕುಚಿತ ತಿಳಿವಳಿಕೆಯ ವಿಸ್ತರಣೆಯ ರೂಪಗಳು. ಸರ್ಕಾರ ಮತ್ತು ಶಿಕ್ಷಣ ವ್ಯವಸ್ಥೆ ಸಮಾಜಕ್ಕೆ ಏನನ್ನು ಬಿತ್ತುತ್ತಿದೆ ಎನ್ನುವುದನ್ನು
ಪ್ರಶ್ನಿಸಿಕೊಳ್ಳಬೇಕಾಗಿದೆ.

ADVERTISEMENT

ಈ ಫಸಲು ನಿನ್ನೆ ಮೊನ್ನೆಯಿಂದ ಕಂಡುಬರುತ್ತಿರುವುದಲ್ಲ. ಹಲವಾರು ವರ್ಷಗಳಲ್ಲಿ ಭಾರತ ಸೃಷ್ಟಿಸಿರುವ ಹೊಸ ತಲೆಮಾರಿನ ವಿಧ್ವಂಸಕ
ಕ್ರಿಯಾಯೋಜನೆಗಳಿವು. ಮತೀಯವಾಗಿ ಧ್ರುವೀಕರಣಗೊಳ್ಳುತ್ತಿರುವ ಭಾರತದ ರಾಜಕೀಯ ಚಿಂತನೆಯ ಪೋಷಣೆಯೂ ಈ ಕೃತ್ಯಗಳ ಹಿಂದಿದೆ. 

–ಜಿ.ವಿ. ಆನಂದಮೂರ್ತಿ, ತುಮಕೂರು

ಟೆಸ್ಟ್ ಕ್ರಿಕೆಟ್‌ಗೆ ಶುಕ್ರದೆಸೆ

ಟಿ–20 ಕ್ರಿಕೆಟ್‌ ಭರಾಟೆಯಲ್ಲಿ ಟೆಸ್ಟ್ ಪಂದ್ಯಗಳು ಎರಡು, ಮೂರು ದಿನಗಳಲ್ಲೇ ಮುಗಿದು ಹೋಗುತ್ತಿದ್ದುದನ್ನು ನೋಡಿ, ಟೆಸ್ಟ್ ಕ್ರಿಕೆಟ್ ಭವಿಷ್ಯ ಮುಗಿದೇ ಹೋಯಿತು ಅನ್ನುವಂತಾಗಿತ್ತು. ಆದರೆ, ಭಾರತ– ಇಂಗ್ಲೆಂಡ್ ಟೆಸ್ಟ್‌ ಸರಣಿಯುದ್ದಕ್ಕೂ ಕೆಚ್ಚೆದೆಯ ಹೋರಾಟವು ಉಭಯ ತಂಡಗಳಿಂದ ಬಂತು. ಎಲ್ಲ ಪಂದ್ಯಗಳು ಕೊನೆಯ ದಿನದವರೆಗೂ ನಡೆದು ಎಲ್ಲ ಹಂತದಲ್ಲೂ ಕುತೂಹಲ ಇತ್ತು. ಡ್ರಾ ಆದ ಪಂದ್ಯವೂ ಕೊನೆಯ ದಿನದವರೆಗೂ ರೋಚಕತೆ ಕಾಪಾಡಿಕೊಂಡಿದ್ದುದು ವಿಶೇಷ. 

–ಬಿ.ಎಸ್. ಪಾಟೀಲ್, ಬೆಂಗಳೂರು

ಮಟ್ಕಾ ದಂಧೆಗೆ ಕಡಿವಾಣ ಬೀಳುವುದೇ?

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮಟ್ಕಾ ಆಟದ ತವರೂರಾಗುತ್ತಿದೆ ಎಂಬ ಆತಂಕ ನಾಗರಿಕರನ್ನು ಕಾಡುತ್ತಿದೆ. ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದವರು, ಜಿಲ್ಲೆಯಲ್ಲಿ ಮಟ್ಕಾ ದಂಧೆಗೆ ಕಡಿವಾಣ ಹಾಕಿದ್ದರು. ಆ ನಂತರ ಬಂದ ಪೊಲೀಸ್‌ ವರಿಷ್ಠಾಧಿಕಾರಿಗಳು ಉದಾಸೀನ ತೋರುತ್ತಿರುವುದೇ ಹೆಚ್ಚು. ಪೊಲೀಸರಿಗೆ ಫೋನಾಯಿಸಿದರೆ, ಒಂದೆರಡು ದಿನ ಮಟ್ಕಾ ಬಂದ್ ಮಾಡಿದಂತೆ ಮಾಡುತ್ತಾರೆ. ನಂತರ ಯಥಾಸ್ಥಿತಿಯಲ್ಲಿ ದಂಧೆ ಮುಂದುವರಿಯುತ್ತದೆ. ವಿದ್ಯಾರ್ಥಿಗಳು, ಹೆಂಗಸರು ಕೂಡ ಮಟ್ಕಾದ ನಶೆ ಏರಿಸಿಕೊಂಡಿದ್ದಾರೆ. ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಇತ್ತ ಗಮನ ಹರಿಸುವರೇ? 

–ಚಂದ್ರಕಾಂತ ನಾಮಧಾರಿ, ಅಂಕೋಲಾ 

ಸರ್ಕಾರದ ಕ್ರಾಂತಿಕಾರಕ ಹೆಜ್ಜೆ

‘ದೇವದಾಸಿ ಮಕ್ಕಳಿಗೆ ಪಿತೃತ್ವ ಹಕ್ಕು’ ಸುದ್ದಿ (ಪ್ರ.ವಾ., ಆಗಸ್ಟ್‌ 4) ಓದಿ ಸಂತಸವಾಯಿತು. ಕೆಳ ಸಮುದಾಯಗಳ ಹೆಣ್ಣುಮಕ್ಕಳೇ ಈ ಅನಿಷ್ಟ ಪದ್ಧತಿಯ ಕೂಪಕ್ಕೆ ಸಿಲುಕುತ್ತಾರೆ. ಒಂದೆಡೆ ಬಡತನ, ಮತ್ತೊಂದೆಡೆ ಧಾರ್ಮಿಕ ಆಚರಣೆಯ ಹೆಸರಲ್ಲಿ ‘ದೇವದಾಸಿ’ ಎಂಬ ಹಣೆಪಟ್ಟಿ ಕಟ್ಟಿ, ನಿತ್ಯವೂ ಅವರ ಮೇಲೆ ಲೈಂಗಿಕ ಶೋಷಣೆ ನಡೆಯುತ್ತಿತ್ತು. ಇದಕ್ಕೆ ಪರಿಹಾರ ಇಲ್ಲದೆ ದೇವದಾಸಿಯರು ತೀವ್ರ ಸಂಕಟ ಅನುಭವಿಸುತ್ತಿದ್ದರು. ಮೇಲ್ವರ್ಗದ ಪುರುಷರಿಂದ ನಿರಂತರವಾಗಿ ಲೈಂಗಿಕ ಶೋಷಣೆ ನಡೆಯುತ್ತಿದ್ದರೂ ದೇವರ ಹೆಸರಿನಲ್ಲಿ ಕಟ್ಟಿದ ತಾಳಿಯು ಪವಿತ್ರವೆಂದೇ ದೇವದಾಸಿಯರು ಭಾವಿಸುತ್ತಿದ್ದರು. ಅವರಿಗೆ ಎಷ್ಟೇ ಮಕ್ಕಳಾದರೂ, ತಂದೆ ಯಾರೆಂದು ಹೇಳಿಕೊಳ್ಳಲಾರದ ಸ್ಥಿತಿ. ತಂದೆಯ ಪ್ರೀತಿ ಕಾಣದೆ ನೋವಿನಿಂದ ಚಡಪಡಿಸುತ್ತಿದ್ದ ಮಕ್ಕಳಿಗೆ ಪಿತೃತ್ವದ ಹಕ್ಕು ಪಡೆಯಲು ಅನುಮತಿಸಿರುವುದು ಸರ್ಕಾರದ ಕ್ರಾಂತಿಕಾರಕ ಹೆಜ್ಜೆಯಾಗಿದೆ.

‍–ಲಲಿತಾ ಬಿಜ್ಜರಗಿ, ಕಲಬುರಗಿ

ಮೈಸೂರಿನ ಮಾನ ಹರಾಜಾಗದಿರಲಿ

ಕನ್ನಂಬಾಡಿಗೆ ಅಡಿಗಲ್ಲಿಟ್ಟ ಟಿಪ್ಪು ಸುಲ್ತಾನ್‌ ಆಗಲೀ, ಅರಮನೆಯ ಒಡವೆಗಳನ್ನು ಮಾರಿದ ಅರಸರಾಗಲೀ ಈಗ ಬದುಕಿಲ್ಲ. ಆದರೆ, ಅವರು  ಮಾಡಿದ ಸಾಧನೆಯ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಕುತೂಹಲಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಭಾಷಣಗಳನ್ನು ಗಮನಿಸಿ.
ಅವು 7–8 ವಾಕ್ಯಗಳಿಗಷ್ಟೇ ಸೀಮಿತ. ಆದರೆ, ಅವರ ದೂರದರ್ಶಿತ್ವ ರಾಜ್ಯದ ಅಭಿವೃದ್ಧಿಗೆ ಮಹತ್ತರ ಕಾಣಿಕೆ ನೀಡಿದೆ. ಜಾತಿಯ ಅವಲಂಬನೆಯಿಲ್ಲದೆ ಸಂಸದರೊಬ್ಬರು ಮೈಸೂರು ಭಾಗದಲ್ಲಿ ಆಯ್ಕೆಯಾಗಬೇಕಾದರೆ ಅಲ್ಲಿನ ಜನರಿಗೆ ರಾಜರ ಮೇಲಿರುವ ಗೌರವವೇ ಕಾರಣ.

ಅಲ್ಪಸಂಖ್ಯಾತರಾದ ಮೈಸೂರು ಅರಸರು ಯಾವ ಭಾಷೆ– ಕಾರ್ಯಗಳಿಂದ ಜನಮೆಚ್ಚುಗೆಗೆ ಭಾಗಿಯಾಗಿದ್ದರು ಎಂಬುದನ್ನು
ಜನಪ್ರತಿನಿಧಿಗಳು ಅರಿತು ಮಾತನಾಡುವುದು ಉತ್ತಮ.

ಅದೇ ರೀತಿ, ಮಾರುವೇಷದಲ್ಲಿ ಜನರ ಮಧ್ಯೆ ಸಂಚರಿಸಿ,
ಕೆರೆ– ಕಟ್ಟೆ– ಕೃಷಿಗೆ ಉತ್ತೇಜನ ನೀಡಿದ ಟಿಪ್ಪು ಕಾಣಿಕೆಯೇನೂ ನಗಣ್ಯವಲ್ಲ. ಅರ್ಧರಾಜ್ಯವನ್ನೇ ಕಳೆದುಕೊಂಡರೂ ಬ್ರಿಟಿಷರ ಸಾಲ ತೀರಿಸಿ, ಮತ್ತೆ ಯುದ್ಧಕ್ಕೆ ನಿಲ್ಲಲು ಟಿಪ್ಪುವಿಗೆ ಕೃಷಿ ಆದಾಯವೇ ಮೂಲವಾಗಿತ್ತು.
ಇಡೀ ಜಗತ್ತಿನಲ್ಲಿ ಕೃಷಿಕರ ಏಳಿಗೆಗಾಗಿ ಬ್ಯಾಂಕ್‌ ಸ್ಥಾಪಿಸಿದ (ತಕಾವಿ ಸಾಲ) ಇನ್ನೊಬ್ಬ ದೊರೆಯನ್ನು ಕಾಣುವುದು ಅಪರೂಪ. ರಾಜಕೀಯ ಟೀಕೆಯ ಭರದಲ್ಲಿ ಒಂದು ಪಕ್ಷಕ್ಕಿಂತ ಮಿಗಿಲಾದ ವರ್ಚಸ್ಸು ಸಂಪಾದಿಸಿರುವ ಮೈಸೂರಿನ ಗೌರವವನ್ನು ಕಳೆಯುವುದು ಸೂಕ್ತವಲ್ಲ.

– ಸಿದ್ದೇಗೌಡ ಶಾಂತರಾಜು, ಬೆಂಗಳೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.