ADVERTISEMENT

ವಾಚಕರ ವಾಣಿ: ಹೊಸ ಪ್ರತಿಮೆ ಅಗತ್ಯವೇ?

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 19:31 IST
Last Updated 9 ಜನವರಿ 2023, 19:31 IST

ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ ಮತ್ತು ಕೆಂಪೇಗೌಡ ಅವರ ಪ್ರತಿಮೆಗಳ ಸ್ಥಾಪನೆಗೆ ಸರ್ಕಾರ ಶಂಕುಸ್ಥಾಪನೆ ಮಾಡಲು ಹೊರಟಿರುವುದು ಆಶ್ಚರ್ಯಕರ. ರಾಜ್ಯದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳು ತಾಂಡವ ವಾಡುತ್ತಿವೆ. ಸೂರು ಮತ್ತು ಆಹಾರದಂತಹ ಪ್ರಮುಖ ವಿಚಾರಗಳ ಬಗ್ಗೆ ಗಮನಹರಿಸುವುದು ಸರ್ಕಾರದ ಆದ್ಯತೆಯಾಗಬೇಕೇ ವಿನಾ ಪ್ರತಿಮೆಗಳ ಸ್ಥಾಪನೆ ಇಂದಿನ ಜರೂರತ್ತಲ್ಲ. ತೆರಿಗೆದಾರರ ಹಣವನ್ನು ಈ ರೀತಿ ಪೋಲು ಮಾಡುವುದು ನ್ಯಾಯಸಮ್ಮತವೂ ಅಲ್ಲ.

‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂಬ ಬಸವಣ್ಣನವರ ಮಾತನ್ನೇ ಸುಳ್ಳಾಗಿಸುವ ಪ್ರಯತ್ನ ಸರ್ವಥಾ ಸಲ್ಲದು. ₹ 84 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸುಂದರವಾದ ಅಶ್ವಾರೋಹಿ ಕೆಂಪೇಗೌಡರ 108 ಅಡಿ ಪ್ರತಿಮೆಯನ್ನು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಈಚೆಗಷ್ಟೇ ಪ್ರಧಾನಿ ಉದ್ಘಾಟಿಸಿದ್ದಾರೆ. 2020ರಲ್ಲಿ ಅಶ್ವಾರೋಹಿ ಬಸವಣ್ಣನವರ ಪ್ರತಿಮೆಯನ್ನು ವಿಧಾನಸೌಧದ ಕೂಗಳತೆಯ ದೂರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಹೀಗಿರುವಾಗ ಮತ್ತೆರಡು ಪ್ರತಿಮೆಗಳ ಅವಶ್ಯಕತೆಯಿದೆಯೇ? ಪ್ರತಿಮೆಗಳನ್ನು ನಿರ್ಮಿಸಲು ಹೀಗೆ ದುಂದುವೆಚ್ಚ ಮಾಡುವ ಬದಲು, ಚಾಲುಕ್ಯ ವೃತ್ತದಲ್ಲಿರುವ ಪ್ರತಿಮೆಯನ್ನು ವಿಧಾನಸೌಧಕ್ಕೆ ಸ್ಥಳಾಂತರಿಸಲಿ ಹಾಗೂ ಸರ್ಕಾರದ ವೆಚ್ಚದಲ್ಲಿ ಈಗಾಗಲೇ ನಗರದ ಹಲವಾರು ಬಡಾವಣೆಗಳ ಉದ್ಯಾನ
ಗಳಲ್ಲಿ ಸ್ಥಾಪಿಸಿರುವ ಉತ್ತಮವಾದ ಅಶ್ವಾರೋಹಿ ಕೆಂಪೇಗೌಡರ ಪ್ರತಿಮೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ವಿಧಾನಸೌಧದ ಆವರಣದಲ್ಲಿಯೇ ಸ್ಥಾಪಿಸಲಿ.

–ಚಿ.ಉಮಾಶಂಕರ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.