ADVERTISEMENT

ವಾಚಕರ ವಾಣಿ| ಭಗವದ್ಗೀತೆ: ಔಚಿತ್ಯದ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 20:08 IST
Last Updated 27 ಮಾರ್ಚ್ 2022, 20:08 IST

ಶಾಲಾ ಶಿಕ್ಷಣದಲ್ಲಿ ಭಗವದ್ಗೀತೆಯ ಪಠ್ಯ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಭಿನ್ನ ಅಭಿಪ್ರಾಯಗಳನ್ನು (ಪ್ರ.ಜಾ., ಚರ್ಚೆ, ಮಾರ್ಚ್ 26) ಪ್ರಕಟಿಸಿದ್ದು ಸಾಂದರ್ಭಿಕವಾದುದಾಗಿದೆ.ಆದರೆ, ‘ಶಿಕ್ಷಣದಲ್ಲಿ ಭಗವದ್ಗೀತೆ ಬೇಡವೇ?’ ಎಂಬ ನಾರಾಯಣ ಶೇವರೆ ಅವರ ಲೇಖನವು ಚರ್ಚಾಪಟುವಿನ ವಾದ ಮಂಡನೆಯಂತೆ ತೋರು ತ್ತದೆ. ಬೌದ್ಧಿಕ ವಲಯವು ಭಗವದ್ಗೀತೆಯನ್ನು ವಿರೋಧಿಸುತ್ತದೆ ಎಂಬ ಅವರ ಪೂರ್ವಗ್ರಹಿಕೆಯು ಇದಕ್ಕೆ ಬಹುಶಃ ಕಾರಣವಾಗಿರಬಹುದು.ಕೆಲವು ಕಾರಣಗಳಿಗಾಗಿ ಮತ್ತು ಕೆಲವು ಶ್ಲೋಕಗಳಲ್ಲಿನ ವಿಚಾರಗಳಿಗಾಗಿ ವಿರೋಧವಿದೆಯೇ ಹೊರತು ಇಡೀ ಭಗವದ್ಗೀತೆಯನ್ನು ಯಾರೂ ವಿರೋಧಿಸುತ್ತಿಲ್ಲ ಮತ್ತು ಶಾಲಾ ಹಂತದಲ್ಲಿನ ಸಾಧ್ಯಾಸಾಧ್ಯತೆಗಳ ಹಿನ್ನೆಲೆಯಲ್ಲಿ ಇದರ ಔಚಿತ್ಯ ಉಚಿತವೇ ಎಂಬುದನ್ನು ಅವರು ಅರಿಯಬೇಕಾಗಿದೆ.

ಕುರಾನ್ ಹೇಳುವ ‘ಒಬ್ಬ ವ್ಯಕ್ತಿಯ ಸಂಕಟ ಇಡೀ ಮನುಕುಲದ ಸಂಕಟ’ ಮತ್ತು ‘ಕೂಲಿಯವನ ಮೈಮೇಲಿನ ಬೆವರು ಆರುವುದಕ್ಕೆ ಮುಂಚೆ ಅವನ ಕೂಲಿಯನ್ನು ಕೊಟ್ಟುಬಿಡಬೇಕು’ ಹಾಗೂ ಬೈಬಲ್ ಹೇಳುವ ‘ನಿನ್ನ ಶತ್ರುವನ್ನು ಪ್ರೀತಿಸು’ ಎಂಬ ಮಾತುಗಳು ಎಲ್ಲರನ್ನೂ ಒಳಗೊಳ್ಳುವ ಸಂಗತಿಗಳಲ್ಲವೇ?

‘ಕ್ರೈಸ್ತ ರಿಲಿಜನ್ ಬಗ್ಗೆ ಬೈಬಲ್ ಅತ್ಯಂತ ಸ್ಪಷ್ಟವಾಗಿ ಆಗ್ರಹಿಸುತ್ತದೆ. ಹಾಗೆಯೇ ಇಸ್ಲಾಮಿನ ಶ್ರೇಷ್ಠತೆಯನ್ನು ಕುರಾನ್ ಯಾವುದೇ ಗೊಂದಲವಿಲ್ಲದೆ ಸಾರುತ್ತದೆ. ಆದರೆ ಇಡಿಯ ಗೀತೆಯಲ್ಲಿ ಎಲ್ಲಿಯೂ ಹಿಂದೂ ಎಂಬ ಪದವಾಗಲೀ, ದೇಶವಾಚಕವಾಗಿ ಭಾರತದ ಉಲ್ಲೇಖವಾಗಲೀ ಇಲ್ಲ...’ ಎಂಬ ಮಾತು ಅಸಂಬದ್ಧವಾಗಿದೆ. ಏಕೆಂದರೆ ಭಗವದ್ಗೀತೆ ಯಲ್ಲಿ ಹಾಗಂತ ಉಲ್ಲೇಖಿಸದಿದ್ದರೂ ಅದರಲ್ಲಿ ಅಂತರ್ಗತವಾಗಿ ನಿಹಿತವಾಗಿದೆ. ಭಗವದ್ಗೀತೆಯ ‘ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ’ (18- 66) (ಎಲ್ಲ ಧರ್ಮಗಳನ್ನು ಪರಿತ್ಯಜಿಸಿ ನನ್ನೊಬ್ಬನಲ್ಲಿಯೇ ಶರಣಾಗು), ‘ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್’ (18-47) (ಚೆನ್ನಾಗಿ ಅನುಷ್ಠಾನ ಮಾಡಲ್ಪಟ್ಟ ಪರ ಧರ್ಮಕ್ಕಿಂತ ಗುಣರಹಿತವಾದಾಗ್ಯೂ ಸಹ ತನ್ನ ಧರ್ಮವೇ ಶ್ರೇಯಸ್ಕರವಾದುದು) ಮತ್ತು ‘ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ’ (3-35) (ತನ್ನ ಧರ್ಮದಲ್ಲಿ ಸತ್ತರೂ ಶ್ರೇಯವೇ, ಬೇರೆ ಧರ್ಮ ಭಯವನ್ನುಂಟು ಮಾಡುವಂತಹುದು)- ಈ ಮುಂತಾದ ಹಲವಾರು ಹೇಳಿಕೆಗಳು ಸೂಚಿಸುವುದು ಹಿಂದೂ ಧರ್ಮವನ್ನಲ್ಲದೆ ಮತ್ತೇನು? ಅಷ್ಟೆ ಅಲ್ಲದೆ ಅವರು ಹೇಳುವ ಸ್ಪರ್ಧಾತ್ಮಕತೆ, ಮನಃಶಾಸ್ತ್ರೀಯ ಗುಣ, ಆತ್ಮತತ್ವ, ಧರ್ಮಸೂಕ್ಷ್ಮತೆ ಇತ್ಯಾದಿ ಅಂಶಗಳು ಭಗವದ್ಗೀತೆಯಲ್ಲಿ ಮಾತ್ರ ಲಭ್ಯವಾಗುವಂತಹವು ಎಂಬುದನ್ನು ಒಪ್ಪಲಾದೀತೆ?

ADVERTISEMENT

- ಪು.ಸೂ. ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.