ADVERTISEMENT

ವಾಚಕರ ವಾಣಿ: ಕನ್ನಡ ಕಲಿಕೆ ಕಡ್ಡಾಯಗೊಳ್ಳಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಫೆಬ್ರುವರಿ 2022, 19:30 IST
Last Updated 24 ಫೆಬ್ರುವರಿ 2022, 19:30 IST

ಮಾತೃಭಾಷಾ ದಿನದಂದು (ಫೆ. 21) ಕನ್ನಡದ ಕುರಿತು ಹಲವು ರೀತಿಯಲ್ಲಿ ಅಲ್ಲಲ್ಲಿ ಚರ್ಚೆಗಳಾಗಿವೆ. ಅಂತೆಯೇ ಪ್ರತೀ ನವೆಂಬರ್ ತಿಂಗಳಿಡೀ ಕನ್ನಡ ಕಟ್ಟುವ ಕುರಿತು ಭಾಷಣಗಳಾಗುತ್ತವೆ. ನಮ್ಮ ಮಾತೃಭಾಷೆಯನ್ನು ಬೆಳೆಸಲು ಮಕ್ಕಳಲ್ಲಿ ಮೊದಲು ಭಾಷಾಭಿಮಾನ ಬೆಳೆಸಬೇಕು. ಕರ್ನಾಟಕ ಸರ್ಕಾರವು ಕನ್ನಡ ಭಾಷಾ ಬೆಳವಣಿಗೆ ದೃಷ್ಟಿಯಿಂದ ಕನಿಷ್ಠ ಐದನೇ ತರಗತಿಯವರೆಗಾದರೂ ಕನ್ನಡ ವಿಷಯವನ್ನು ಕಡ್ಡಾಯಗೊಳಿಸಬೇಕು. ಕನ್ನಡ ಉಳಿಸಿ ಬೆಳೆಸುವ ಇಚ್ಛಾಶಕ್ತಿ ಪ್ರತಿಯೊಬ್ಬ ಕನ್ನಡಿಗರ ಮನೆ ಮನದಲ್ಲೂ ಅರಳಬೇಕು. ಆದರೆ ಕನ್ನಡಿಗರು ಭಾಷೆ ವಿಷಯದಲ್ಲಿ ಹೆಚ್ಚು ಔದಾರ್ಯವಂತರು!

ಕರ್ನಾಟಕದಲ್ಲೇ ತಮಿಳು, ತೆಲುಗು, ಹಿಂದಿ ಭಾಷೆಯವರು ತಮ್ಮ ಭಾಷೆಯಲ್ಲಿ ಮಾತನಾಡಿದರೆ ಕನ್ನಡಿಗರು ಅವರವರದೇ ಭಾಷೆಯಲ್ಲಿ ಉತ್ತರಿಸುತ್ತಾರೆ. ಅವರಲ್ಲಿ ಕನ್ನಡ ಮಾತನಾಡುವ ಗೋಜಿಗೂ ಹೋಗುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ಕೆಲವು ಶಾಖೆಗಳಲ್ಲಿ ಕನ್ನಡ ಬಾರದ, ಹಿಂದಿಯನ್ನೇ ಮಾತನಾಡುವ ಹಲವು ಉದ್ಯೋಗಿಗಳಿದ್ದಾರೆ. ಗ್ರಾಹಕರೊಂದಿಗೆ ಅವರು ಹಿಂದಿಯಲ್ಲೇ ಮಾತನಾಡುತ್ತಾರೆ. ಕನ್ನಡಿಗರು ಬೇರೆಯವರ ಸಹಾಯ ಪಡೆದು ಅವರ ಕೆಲಸ ಮಾಡಿಕೊಂಡು ಬರಬೇಕು. ಇದು ಕನ್ನಡಿಗರ ವ್ಯಥೆಯ ಕಥೆ. ಕನ್ನಡ ಭಾಷೆ ಬೆಳವಣಿಗೆಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡುವ ಅಗತ್ಯವಿದೆ. ಎಂಥ ಸವಾಲು ಎದುರಾದರೂ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡುವುದರಿಂದ ಮಾತ್ರ ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯ.

-ಗಣಪತಿ ಶಿರಳಗಿ, ಸಾಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.