ADVERTISEMENT

ಸಂತಸ ತಂದ ಧಾರಾವಾಹಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 21 ಜುಲೈ 2020, 19:30 IST
Last Updated 21 ಜುಲೈ 2020, 19:30 IST

ಡಬ್ಬಿಂಗ್ ಧಾರಾವಾಹಿಗಳಲ್ಲಿ ಈ ನೆಲದ ಸೊಗಡು ಇಲ್ಲದಿರುವುದರಿಂದ, ಸೃಜನಾತ್ಮಕತೆ ಮತ್ತು ಕನ್ನಡದ ಸಂಸ್ಕೃತಿಗೆ ಅಪಾಯ ಉಂಟಾಗುತ್ತದೆ; ಹೀಗಾಗಿ, ಇದರ ವಿರುದ್ಧ ದನಿ ಎತ್ತಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಜುಲೈ 18). ಆದರೆ ಈ ಧಾರಾವಾಹಿಗಳ ವೀಕ್ಷಕಳಾಗಿ ನಾನಿದನ್ನು ಒಪ್ಪುವುದಿಲ್ಲ. ಇಂತಹ ಡಬ್ಬಿಂಗ್ ಧಾರಾವಾಹಿಗಳಿಂದ ವೀಕ್ಷಕರಿಗೆ ಕಿರಿಕಿರಿ ಆಗಿದ್ದಲ್ಲಿ ಅವು ಇಷ್ಟೊಂದು ಪ್ರಮಾಣದಲ್ಲಿ ಜನಪ್ರಿಯವಾಗುತ್ತಿರಲಿಲ್ಲ. ಇನ್ನು ಸ್ಥಳೀಯ ಸಂಸ್ಕೃತಿ, ನಂಬಿಕೆ, ಸಂಪ್ರದಾಯಗಳನ್ನು ಅಪ್ಪಟ ಕನ್ನಡದ ಧಾರಾವಾಹಿಗಳಲ್ಲೂ ನಾವಿಂದು ಕಾಣಲಾರೆವು. ನಮ್ಮ ಸಂಸ್ಕೃತಿ, ನೆಲದ ಸೊಗಡನ್ನು ಕಟ್ಟಿಕೊಡುವಲ್ಲಿ ಇಂದಿನ ಧಾರಾವಾಹಿಗಳು ಸೋತಿವೆ. ಬದಲಾಗಿ, ಸತ್ಯಕ್ಕೆ ದೂರವಾದ, ನಿಜ ಜೀವನದಲ್ಲಿ ಕಂಡುಕೇಳರಿಯದ ಅಸಂಬದ್ಧ ಕಥೆಗಳನ್ನು ಹೆಣೆದು ವೀಕ್ಷಕರ ಮುಂದಿಡುತ್ತಿವೆ. ದ್ವೇಷ, ಸೇಡು, ಹಿಂಸೆ, ಕ್ರೌರ್ಯ ತುಂಬಿ ತುಳುಕುವ ಇಂತಹ ಧಾರಾವಾಹಿಗಳಿಗಿಂತ ಮಾಲ್ಗುಡಿ ಡೇಸ್, ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್, ಮಹಾಭಾರತದಂಥ ಚಂದದ ಧಾರಾವಾಹಿಗಳಕನ್ನಡ ರೂಪಾಂತರ ನೋಡಲು ಸಿಕ್ಕಿರುವುದರಿಂದ, ಹಿಂದಿ ಬಾರದ ಅನೇಕ ವೀಕ್ಷಕರಿಗೆ ಬಹಳ ಸಂತಸವಾಗಿದೆ.

ಕೇವಲ ಡಬ್ಬಿಂಗ್ ಬೇಡವೆಂದರೆ ಸಾಲದು, ಅಂತಹ ಧಾರಾವಾಹಿಗಳ ಗುಣಮಟ್ಟಕ್ಕೆ ತಕ್ಕಂತೆ ನಮ್ಮ ಭಾಷೆಯಲ್ಲೇ ಕಥೆ ಹೆಣೆದು ಪ್ರಸ್ತುತಪಡಿಸಿದರೆ ಯಾವ ಕನ್ನಡದ ವೀಕ್ಷಕ ತಾನೇ ಬೇಡವೆಂದಾನು? ಮಾಲ್ಗುಡಿ ಡೇಸ್ ಕನ್ನಡದವರ ಕೈಯಲ್ಲೇ ಅರಳಿದ ಅದ್ಭುತ ಹಿಂದಿ ಧಾರಾವಾಹಿ. ಇದನ್ನು ದೇಶದ ಹಲವಾರು ಭಾಷೆಗಳಿಗೆ ಡಬ್‌ ಮಾಡಲಾಗಿದೆ. ಈ ರೀತಿಯ ಸತ್ವಯುತ ಧಾರಾವಾಹಿಗಳು ಕನ್ನಡದಲ್ಲೇ ತಯಾರಾಗಿ ಇತರ ಭಾಷೆಯವರು ಅವನ್ನು ತಮ್ಮ ಭಾಷೆಗಳಿಗೆ ಡಬ್ ಮಾಡುವಂತಾಗಬೇಕು.

– ಸ್ನೇಹಾ ಕೃಷ್ಣನ್,ಕೊರಟಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.