ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು 17 ಜನವರಿ 2026

ವಾಚಕರ ವಾಣಿ
Published 16 ಜನವರಿ 2026, 23:52 IST
Last Updated 16 ಜನವರಿ 2026, 23:52 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಕನ್ನಡ ಪುಸ್ತಕ ಸಂಸ್ಕೃತಿ, ದೇವರೇ ಗತಿ!

ರಾಜ್ಯದ ಗ್ರಂಥಾಲಯಗಳಲ್ಲಿ ಹೊಸ ಪುಸ್ತಕಗಳಿಲ್ಲ. ಮೂರು ವರ್ಷಗಳಾದರೂ ಪುಸ್ತಕ ಖರೀದಿಯ ಬಾಕಿ ಹಣ ಪಾವತಿಯಾಗಿಲ್ಲ. ಸಗಟು ಖರೀದಿ ಪ್ರಕ್ರಿಯೆ ನಿಂತು ಹೋಗಿದೆ. ಆರ್ಥಿಕ ವರ್ಷ ಮುಗಿಯುತ್ತಿದ್ದರೂ ಬಜೆಟ್‌ ಅನುಮೋದನೆ ಆಗಿಲ್ಲ. ಅಂತಿಮಗೊಂಡಿರುವ 2022ನೇ ಸಾಲಿನ ಪುಸ್ತಕಗಳ ಆಯ್ಕೆಪಟ್ಟಿ ಬಿಡುಗಡೆಯಾಗುತ್ತಿಲ್ಲ. ಎಂಟು ವರ್ಷಗಳಿಂದ ಪುಸ್ತಕದ ಪುಟವಾರು ದರ ಏರಿಕೆಮಾಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಸಚಿವರು, ಸರ್ಕಾರದ ಕಾರ್ಯದರ್ಶಿ, ಇಲಾಖೆಯ ಆಯುಕ್ತರಿಗೆ ಹತ್ತಾರು ಮನವಿ ಪತ್ರ ಸಲ್ಲಿಸಿ, ಚರ್ಚಿಸಿ, ಬೇಡಿಕೊಂಡರೂ ಪ್ರಯೋಜನವಾಗಿಲ್ಲ. ಕಾರಣ, ಯಕ್ಷಪ್ರಶ್ನೆ! ತೆರಿಗೆ ಹಣದಿಂದ ಜೀವಿಸುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆ ಮಾಡಲು ಸಾಧ್ಯವೇ? ರಾಜ್ಯದ ಪುಸ್ತಕ ಸಂಸ್ಕೃತಿಯನ್ನು ದೇವರೇ ಉಳಿಸಿ ಬೆಳೆಸಬೇಕಿದೆ.

-ನಿಡಸಾಲೆ ಪುಟ್ಟಸ್ವಾಮಯ್ಯ, ಬೆಂಗಳೂರು

ADVERTISEMENT

ಸಿಗರೇಟ್‌ ಕೃತಕ ಅಭಾವ: ಗ್ರಾಹಕರಿಗೆ ಬರೆ

ಕೇಂದ್ರ ಸರ್ಕಾರವು ಫೆಬ್ರುವರಿ 1ರಿಂದ ಸಿಗರೇಟ್‌ ಹಾಗೂ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸುವುದಾಗಿ ಪ್ರಕಟಿಸಿದೆ. ಇದು ಸಿಗರೇಟ್‌ಮಾರಾಟಗಾರರಿಗೆ ವರದಾನವಾಗಿದೆ. ಸಿಗರೇಟನ್ನು ದಾಸ್ತಾನು ಮಾಡಿಟ್ಟು ಒಂದೂವರೆಪಟ್ಟು ಹೆಚ್ಚು ಬೆಲೆಗೆ ಮಾರುತ್ತಿದ್ದಾರೆ. ಕೆಲವೆಡೆ ಪೂರೈಕೆ ಸ್ಥಗಿತಗೊಳ್ಳುವಂತೆ ಮಾಡುತ್ತಿದ್ದಾರೆ. ಈ ವಿಷಯದಲ್ಲಷ್ಟೇ ಅಲ್ಲ. ಪೆಟ್ರೋಲ್ ಬೆಲೆ ಏರಿಕೆ ಸಮಯದಲ್ಲಿಯೂ ಕೃತಕ ಅಭಾವ ಸೃಷ್ಟಿಸುತ್ತಾರೆ. ಈ ಬಗ್ಗೆ ಸರ್ಕಾರ ತಪಾಸಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.

-ಪ್ರಶಾಂತ್ ಕೆ.ಸಿ., ಚಾಮರಾಜನಗರ

ಜಾತ್ಯತೀತ ಮೌಲ್ಯಗಳಿಗೆ ಬೆಲೆ ಕಟ್ಟಲಾದೀತೆ?

‘ಕರ್ನಾಟಕಕ್ಕೆ ಒಬ್ಬರೇ ದೇವರಾಜ ಅರಸು!’ ಲೇಖನದಲ್ಲಿ (ಲೇ: ಆರ್. ರಘು (ಕೌಟಿಲ್ಯ), ಪ್ರ.ವಾ., ಜ. 16) ದೇವರಾಜ ಅರಸು ಮತ್ತು ಸಿದ್ದರಾಮಯ್ಯನವರ ಕಾರ್ಯವೈಖರಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ, ಈ ಇಬ್ಬರ ಕಾಲಘಟ್ಟದ ರಾಜಕೀಯ ಇತಿಮಿತಿಗಳೇ ಬೇರೆ. ಈ ನಿಟ್ಟಿನಲ್ಲಿ ನೋಡಿದಾಗ ಇಬ್ಬರ ಶಕ್ತಿ, ಸಾಮರ್ಥ್ಯಗಳು ಸ್ಪಷ್ಟವಾಗುತ್ತವೆಯೇ ಹೊರತು ಇಬ್ಬರಲ್ಲಿ ಒಬ್ಬರನ್ನು ಮಾತ್ರ ಮೇಲೆಂದು ನೋಡುವುದು ಸರಿಯಲ್ಲ. ಅರಸು ಅವರ ಅಷ್ಟೆಲ್ಲಾ ಜನಪರ ಕಾಳಜಿಗಳ ಒಟ್ಟಿಗೆ, ಅವರ ಅವಧಿಯಲ್ಲಿಯೂ ಭ್ರಷ್ಟಾಚಾರ ಇತ್ತೆನ್ನುವುದನ್ನು ಗಮನಿಸಬೇಕು. ಸಿದ್ದರಾಮಯ್ಯನವರ ಅವಧಿಯಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ. ಆದರೂ, ಈ ಇಬ್ಬರೂ ಕೋಮುವಾದಿಗಳಾಗದೆ ಸಂವಿಧಾನ ಪ್ರತಿಪಾದಿಸುವ ಜಾತ್ಯತೀತ ಮೌಲ್ಯಕ್ಕೆ ಬದ್ಧರಾಗಿರುವುದನ್ನು ನಾವು ಮೆಚ್ಚಲೇಬೇಕಿದೆ.

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ಚಾಮುಂಡಿ ಒಡಲು; ಮುಕ್ಕಾಗುವ ದಿಗಿಲು

ಚಾಮುಂಡಿ ಬೆಟ್ಟವು ತನ್ನ ನೈಸರ್ಗಿಕ ಸೌಂದರ್ಯ, ಭಕ್ತಿ ಮತ್ತು ಪರಂಪರೆಗೆ ಹೆಸರುವಾಸಿ. ಆದರೆ, ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಬೆಟ್ಟದ ಸೌಂದರ್ಯ ಹಾಗೂ ಪರಂಪರೆಗೆ ಧಕ್ಕೆ ತರಲಾಗುತ್ತಿದೆ. ಕೇಂದ್ರ ಸರ್ಕಾರದ ‘ಪ್ರಸಾದ್’ ಯೋಜನೆಯಡಿ ಚಾಮುಂಡಿ ಬೆಟ್ಟ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರವು ದೇಗುಲದ ಪಕ್ಕದಲ್ಲಿ ವಾಹನಗಳ ತಂಗುದಾಣ, ವಾಣಿಜ್ಯ ಕಟ್ಟಡ ನಿರ್ಮಿಸಲು ರಸ್ತೆ ಅಗೆದಿದೆ. ಈ ಕಾಮಗಾರಿಯಿಂದ ದೇವಸ್ಥಾನದ ಸುತ್ತಮುತ್ತಲಿನ ಸೌಂದರ್ಯಕ್ಕೆ ಹಾನಿಯಾಗಲಿದೆ. ಈಗಾಗಲೇ, ಪ್ರಾಧಿಕಾರದ ರಚನೆ ವಿರುದ್ಧ ರಾಜವಂಶಸ್ಥರು ಕೋರ್ಟ್ ಮೆಟ್ಟಿಲೇರಿದ್ದಾರೆ. ಈಗ ಏಕಾಏಕಿ ಅಭಿವೃದ್ಧಿಯ ನೆಪದಲ್ಲಿ ಬೆಟ್ಟದ ನೈಸರ್ಗಿಕ ಸೌಂದರ್ಯವನ್ನು ಹಾಳು ಮಾಡಲು ಹೊರಟಿರುವುದು ಸರಿಯಲ್ಲ.

-ಲಕ್ಷ್ಮಿ ಕಿಶೋರ್ ಅರಸ್, ಮೈಸೂರು

‘ಕಲ್ಯಾಣ’ಕ್ಕೆ ಸಿಗದ ನ್ಯಾಯೋಚಿತ ಪಾಲು

ರೈಲ್ವೆ ಯೋಜನೆಗಳಲ್ಲಿ ರಾಜ್ಯಕ್ಕೆ ನ್ಯಾಯೋಚಿತ ಪಾಲು ಪಡೆಯುವುದಕ್ಕಾಗಿ 2003ರಲ್ಲಿ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆಯ ಪ್ರಧಾನ ಕಚೇರಿ ಅಸ್ತಿತ್ವಕ್ಕೆ ಬಂದಿತು. ಆದರೆ, ಎರಡು ದಶಕದ ನಂತರವೂ ಕೆಲವು ಜಿಲ್ಲೆಗಳಿಗೆ ರೈಲ್ವೆ ಸೌಲಭ್ಯಗಳು ಮರೀಚಿಕೆಯಾಗಿವೆ. ಪ್ರತ್ಯೇಕ ವಲಯ ಸ್ಥಾಪನೆಯ ಉದ್ದೇಶವೇ ಮೂಲೆಗೆ ಸರಿದಿದೆ. ಕಳೆದ 10 ವರ್ಷಗಳಿಂದ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ ಜಿಲ್ಲೆಗಳಿಗೆ ಆದ್ಯತೆ ಸಿಕ್ಕಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಸರಕು ಸಾಗಾಣಿಕೆಯಲ್ಲಿ ರೈಲ್ವೆ ವಲಯಕ್ಕೆ ಅತಿಹೆಚ್ಚು ಆದಾಯ ನೀಡುತ್ತಿರುವ ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಯ ಬೇಡಿಕೆಗಳಿಗೆ ಇಲಾಖೆಯು ಮಲತಾಯಿ ಧೋರಣೆ ತಳೆದಿದೆ.

-ಮಹೇಶ್ ಕುಡಿತಿನಿ, ಹೊಸಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.