ADVERTISEMENT

ವಿದ್ಯುತ್‌ ಕೊರತೆ: ಹಳ್ಳಿಗಳೇ ಗುರಿಯೇಕೆ?

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 19:30 IST
Last Updated 27 ಡಿಸೆಂಬರ್ 2020, 19:30 IST

ನಾನು ವಾಸಿಸುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಳ್ಳಿಯಲ್ಲಿ ದಿನಕ್ಕೆ ಆರು ಗಂಟೆ ವಿದ್ಯುತ್ ಕಡಿತ ಶುರುವಾಗಿದೆ. ಇನ್ನು ಮಳೆಗಾಲ ಪ್ರಾರಂಭದವರೆಗೂ ಹೀಗೇ. ಮಳೆಗಾಲದಲ್ಲಿ ಗಾಳಿ, ಮಳೆಯಿಂದಾಗಿ ವಿದ್ಯುತ್ ಇರುವುದು ಅಷ್ಟಕ್ಕಷ್ಟೇ. ನನಗೀಗ 46 ವರ್ಷ. ನಾನು ಚಿಕ್ಕವನಾಗಿದ್ದಾಗಿನಿಂದಲೂ ಇದು ನಡೆದುಕೊಂಡು ಬಂದಿದೆ. ಆಗೆಲ್ಲಾ ನಾವು ವಿಶ್ವಕಪ್, ಭಾರತ– ಪಾಕಿಸ್ತಾನದ ನಡುವಿನ ಪಂದ್ಯದಂತಹ ಮುಖ್ಯ ಕ್ರಿಕೆಟ್ ಪಂದ್ಯಗಳನ್ನು ನೋಡಲು ಪೇಟೆಯ ನೆಂಟರ ಮನೆಗೆ ಹೋಗುತ್ತಿದ್ದೆವು. ಈಗ ದಿನಕ್ಕೆ ಆರು ಗಂಟೆ ವಿದ್ಯುತ್ ಹೋಗುತ್ತಿದ್ದಂತೆಯೇ ಬಿಎಸ್ಎನ್ಎಲ್ ಟವರ್ ಕೂಡಾ ಸ್ಥಗಿತಗೊಳ್ಳುತ್ತದೆ. ಈ ಆಧುನಿಕ ಯುಗದಲ್ಲಿ ಹಳ್ಳಿಯವರಿಗೆ ಡಬಲ್ ಶಿಕ್ಷೆ!

ಅಸಮರ್ಪಕ ವಿತರಣಾ ವ್ಯವಸ್ಥೆ, ವಿದ್ಯುತ್ ಉತ್ಪಾದನೆಯಲ್ಲಿ ಏರುಪೇರು, ಭ್ರಷ್ಟ ಅಧಿಕಾರಿಗಳು... ಹೀಗೆ ವಿದ್ಯುತ್ ಕೊರತೆಗೆ ಅನೇಕ ಕಾರಣಗಳಿರಬಹುದು. ಆದರೆ ಆ ಕೊರತೆಯ ಬಾಧೆಯನ್ನು ಕೇವಲ ಹಳ್ಳಿಗರ ಮೇಲೇ ಹಾಕುವುದು ಎಷ್ಟು ಸರಿ? ಡೆನ್ಮಾರ್ಕ್‌ನಲ್ಲಿ ಗ್ರೀನ್ ಲ್ಯಾಂಡ್‌ನ ಅತಿ ದೂರದ ಒಂಟಿ ಹಳ್ಳಿಗಳಿಗೂ ಅಲ್ಲಿನ ಸರ್ಕಾರ ವಿದ್ಯುತ್ ಹಾಗೂ ಮೊಬೈಲ್ ವ್ಯವಸ್ಥೆ ಮಾಡಿದೆಯೆಂದು ಓದಿದ್ದೇನೆ. ಯುರೋಪ್ ದೇಶಗಳಲ್ಲಿ ಹಳ್ಳಿ ಮತ್ತು ಪೇಟೆ ಎಂದರೆ ವಾಸಿಸುವ ಜಾಗ ಮಾತ್ರ ವ್ಯತ್ಯಾಸ. ಸವಲತ್ತುಗಳು ಎಲ್ಲಾ ಕಡೆ ಒಂದೇ. ಇಲ್ಲಿ ಮಾತ್ರ ನಮ್ಮ ಸರ್ಕಾರಗಳು ಹಳ್ಳಿಯವರನ್ನು ಎರಡನೇ ದರ್ಜೆ ನಾಗರಿಕರಂತೆ ನೋಡುತ್ತಿವೆ. ವಿದ್ಯುತ್ ಕೊರತೆಯಿದ್ದರೆ ಅದಕ್ಕೊಂದು ವ್ಯವಸ್ಥೆ ರೂಪಿಸಲಿ. ಅಲ್ಪವಾದರೂ ಆ ಕೊರತೆಯನ್ನು ನಗರ, ಪಟ್ಟಣಗಳ ಗ್ರಾಹಕರ ಮೇಲೂ ಹಾಕಲಿ. ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆಗಳು ಬಂದು, ವಿದ್ಯುತ್ ಸದಾ ಲಭಿಸುವಂತಾಗಲಿ.

-ಸುಬ್ರಮಣ್ಯ ಮಾಚಿಕೊಪ್ಪ, ಕಲ್ಕೆರೆ, ಕೊಪ್ಪ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.