ಗೂಗಲ್ ಹುಡುಕುವಿಧಾನದಲ್ಲಿ ಕನ್ನಡವು ದೇಶದ ಅತ್ಯಂತ ಕೊಳಕು ಭಾಷೆ ಎಂದು ನಮೂದಿಸಿದ್ದ ಕುರಿತು ಬಹಳಷ್ಟು ಪ್ರತಿಕ್ರಿಯೆ ಬಂದದ್ದರಿಂದ ಗೂಗಲ್ ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ್ದು ಒಂದು ರೀತಿ ಒಳ್ಳೆಯದೇ ಆಯಿತು. ತಮ್ಮ ಭಾಷೆಯನ್ನು ಕೊಳಕು ಎಂದು ಕರೆದರೆ ಆ ಭಾಷೆಯ ಜನರಿಗೆ ನೋವಾಗುವುದು ಸಹಜವೇ. ವಾಸ್ತವವಾಗಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಹೇಳಿದ ಹಾಗೆ, ಯಾವುದೇ ಭಾಷೆಯನ್ನು ಅಸುಂದರ, ಕೊಳಕು ಎಂದೆಲ್ಲ ವಿಭಾಗಿಸುವುದೇ ಅವೈಜ್ಞಾನಿಕ. ಒಂದು ಭಾಷೆಯನ್ನು ಈ ರೀತಿಯಲ್ಲಿ ಮೌಲ್ಯಮಾಪನ ಮಾಡಲು ಯಾವುದೇ ಮಾನ್ಯ ಮಾನದಂಡಗಳಿಲ್ಲ. ಜಗತ್ತಿನ ಎಲ್ಲ ಭಾಷೆಗಳೂ ಶ್ರೇಷ್ಠವೇ.
ರಾಜ್ಯದಲ್ಲಿ ಬರೀ 165 ಜನ ಮಾತನಾಡುವ ವರ್ಲಿ ಅಥವಾ ಬರೀ 470 ಜನ ಮಾತನಾಡುವ ಚೆಂಚು ಎಂಬ ಭಾಷೆಗಳೂ ಶ್ರೇಷ್ಠವಾದವೆ. ಏಕೆಂದರೆ ಅದನ್ನು ಮಾತನಾಡುವ ಜನಸಮುದಾಯದ ಅಗತ್ಯಗಳನ್ನು ಪೂರೈಸುವುದೇ ಭಾಷೆಯ ಕಾರ್ಯ. ಅದನ್ನು ಅವು ಸಮರ್ಥವಾಗಿಯೇ ಮಾಡುತ್ತಿವೆ. ಇನ್ನು, ವಿನೋಬಾ ಭಾವೆಯವರು ಕನ್ನಡದ ಅಕ್ಷರಗಳನ್ನು ‘ಜಗತ್ತಿನ ಲಿಪಿಗಳ ರಾಣಿ’ ಎಂದು ಹೇಳಿದ್ದೂ ಅಭಿಮಾನದ ಹೊಗಳಿಕೆಯಷ್ಟೆ. ಎಲ್ಲ ಭಾರತೀಯ ಭಾಷೆಗಳ ಲಿಪಿಗಳೂ ಕನ್ನಡದ ಹಾಗೆಯೇ ಧ್ವನಿಲಿಪಿಗಳೇ. ಅರೇಬಿಕ್ ಲಿಪಿಯೂ ಆ ಭಾಷೆಯವರ ಬರಹದ ಅಗತ್ಯವನ್ನು ಪೂರೈಸುವುದರಿಂದ ಅದೂ ಶ್ರೇಷ್ಠವೇ. ಉಳಿದವರಿಗೆ ಅದು ಹೇಗೆ ಕಾಣುತ್ತದೆ, ಅನ್ಯಭಾಷೀಯರು ಕಲಿಯುವುದು ಸುಲಭವೇ ಕಷ್ಟವೇ ಎನ್ನುವ ನೆಲೆಯಲ್ಲಿ ಯಾವುದೇ ಭಾಷೆಯನ್ನು ಸುಂದರ ಅಥವಾ ಕೊಳಕು ಎನ್ನುವುದು ಖಂಡಿತವಾಗಿಯೂ ಅವೈಜ್ಞಾನಿಕ. ನಾವು ಈ ಗೊಂದಲದಲ್ಲಿ ಬೀಳುವುದು ಅನಗತ್ಯ.
–ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.