ADVERTISEMENT

ವಾಚಕರ ವಾಣಿ: ತಿಳಿಯಾದ ವಾತಾವರಣದಲ್ಲಿ ಇತ್ಯರ್ಥಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 17:54 IST
Last Updated 25 ಫೆಬ್ರುವರಿ 2021, 17:54 IST

‘ರೈತ ಚಳವಳಿ ಮತ್ತು ಬರಹಗಾರರ ವಿರೋಧ’ ಎಂಬ ಪತ್ರದಲ್ಲಿ (ವಾ.ವಾ., ಫೆ. 25) ಹೇಳಿರುವಂತೆ, ಬರಹಗಾರರು ಬರಹಗಾರರಾಗಿ ಉಳಿಯದೆ ವಿಭಕ್ತಗೊಂಡು ಒಂದಲ್ಲ ಒಂದು ರಾಜಕೀಯ ಪಕ್ಷದವರಾಗಿರುವ ವಿದ್ಯಮಾನ ನಿರ್ಮಾಣವಾಗಿದೆ ಎನ್ನುವುದು ನಿಜವೆನಿಸುತ್ತದೆ. ಅಂದರೆ, ನಮ್ಮ ರಾಜಕೀಯದ ಬಕಾಸುರ ಪ್ರವೃತ್ತಿಯ ವ್ಯಾಪ್ತಿ ಇಂಥದ್ದು! ಈಗ ದೆಹಲಿಯಲ್ಲಿನ ರೈತ ಚಳವಳಿಗೆ ಕಾರಣವಾಗಿರುವುದು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಮೂರು ಕೃಷಿ ಕಾಯ್ದೆಗಳು. ಇವು ಕೃಷಿ ಕ್ಷೇತ್ರಕ್ಕೆ ಹಾಗೂ ಕೃಷಿಕರಿಗೆ ಮಾರಕ ಎಂದು ಸಾಧಿಸಿ ತೋರಿಸಲು ಬರಹಗಾರರಾಗಿರುತ್ತಲೇ ಕಾನೂನು ಪಂಡಿತರೂ ಆಗಿರುವವರೆಷ್ಟು ಮಂದಿ? ಕೃಷಿ ಪ್ರಪಂಚದಲ್ಲಿ ಈಗ ಇರುವ ವಿಸಂಗತಿಗಳು ಯಾವುವು, ಈ ಕಾಯ್ದೆಗಳು ಅವುಗಳನ್ನು ತೊಡೆದು ಹಾಕಿ ಕೃಷಿಕರ ಬದುಕು ಹಸನು ಮಾಡುವುವೇ ಅಥವಾ ಅವರನ್ನು ಇನ್ನಷ್ಟು ಶೋಷಣೆಗೆ ನೂಕುವ ಗುರಿಯುಳ್ಳವೇ ಎನ್ನುವುದನ್ನು ಎಷ್ಟು ಬರಹಗಾರರು ವಿಶ್ಲೇಷಿಸಲು ಸಮರ್ಥರಾಗಿದ್ದಾರೆ?

ಯಾರೂ ಸರ್ವಜ್ಞರಲ್ಲ. ಬರಹಗಾರ ತನ್ನ ಸುತ್ತಮುತ್ತಲಿನ ವಿದ್ಯಮಾನಗಳಿಗೆ ವಿಮುಖನಾಗಿರಲು ಸಾದ್ಯವಿಲ್ಲ; ಅದು ಸಾಧುವೂ ಅಲ್ಲ. ಹಾಗಂತ ಎಲ್ಲೆಲ್ಲೂ ಅವನು ಕಾಣಿಸಿಕೊಳ್ಳಬೇಕೆಂದೇನೂ ಇಲ್ಲ. ಪ್ರಸ್ತುತ ರೈತ ಚಳವಳಿ ಬಗ್ಗೆ ಹೇಳುವುದಾದರೆ, ಎರಡು ಪಕ್ಷಗಳಿಂದಲೂ ದೂರ ನಿಂತು ಸಮಚಿತ್ತದಿಂದ ಎರಡು ಕಡೆಯ ನಿಲುವುಗಳನ್ನೂ ಪರಾಮರ್ಶಿಸುವವರು ಎಲ್ಲಿದ್ದಾರೆ ಎನ್ನುವುದೇ ತಿಳಿಯದು. ಆದಾಗ್ಯೂ ಇರುವ ಎರಡು ಸಾಧ್ಯತೆಗಳಲ್ಲಿ ಒಂದಾದರೂ ಆದರೆ ಆದೀತು. ಮೊದಲನೆಯದು: ಸರ್ಕಾರ ಕೆಲ ಕಾಲ ಕಾಯ್ದೆಗಳನ್ನು ತಡೆಹಿಡಿಯಲು ಸಿದ್ಧವಿರುವುದರಿಂದ ರೈತರು ಚಳವಳಿಯನ್ನು ನಿಲ್ಲಿಸುವುದು. ತಿಳಿಯಾದ ವಾತಾವರಣದಲ್ಲಿ ಈ ಕಾಯ್ದೆಗಳಲ್ಲಿನ ಉತ್ತಮ ಅಂಶಗಳನ್ನು ತಜ್ಞರು ಪರಿಶೀಲಿಸಿ ನೀಡುವ ಅಭಿಪ್ರಾಯವನ್ನು ರೈತರು ಮತ್ತು ಸರ್ಕಾರ ಅಂಗೀಕರಿಸಬೇಕು. ಆದರೆ, ರೈತ ನಾಯಕರು ಇದಕ್ಕೆ ಒಪ್ಪಿದರೆ ಅದು ತಮ್ಮ ಸೋಲು ಎಂದು ಭಾವಿಸುವುದರಿಂದ, ಈಗಿನ ಜಟಿಲಾವಸ್ಥೆಯನ್ನು ನೀಗಲು ಇರುವ ಎರಡನೇ ಸಾಧ್ಯತೆ ಎಂದರೆ, ಕಾಯ್ದೆಗಳ ಸಿಂಧುತ್ವದ ಬಗ್ಗೆ ದಾಖಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಕ್ಷಣ ವಿಚಾರಣೆಗೆ ಕೈಗೆತ್ತಿಕೊಂಡು ಇತ್ಯರ್ಥಗೊಳಿಸುವುದೇ ಸರಿಯಾದ ಮಾರ್ಗ.

ಸಾಮಗ ದತ್ತಾತ್ರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.