ADVERTISEMENT

ವಾಚಕರ ವಾಣಿ| ಆಮ್ಲಜನಕದ ಕೊರತೆ: ದ್ವಂದ್ವ ಏಕೆ?

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 19:21 IST
Last Updated 21 ಜುಲೈ 2021, 19:21 IST

ಕೊರೊನಾ ಎರಡನೇ ಅಲೆ ವೇಳೆ ಆಮ್ಲಜನಕದ ಕೊರತೆಯಿಂದ ಯಾರೂ ಸತ್ತಿಲ್ಲ ಎಂದು ಸಂಸತ್ತಿಗೆ ಒಕ್ಕೂಟ ಸರ್ಕಾರ ಮಾಹಿತಿ ನೀಡಿರುವುದನ್ನು (ಪ್ರ.ವಾ., ಜುಲೈ 21) ತಿಳಿದು ಅಚ್ಚರಿಯಾಯಿತು. ಜನರ ಕಣ್ಣೆದುರಿಗೇ ಆಮ್ಲಜನಕ ಕೊರತೆಯಿಂದ ಸಾವುಗಳು ಸಂಭವಿಸಿರುವಾಗ ಸರ್ಕಾರವೇಕೆ ಈ ರೀತಿ ಸುಳ್ಳು ಹೇಳುತ್ತಿದೆ ಎಂಬುದು ತಿಳಿಯುತ್ತಿಲ್ಲ. ಆರೋಗ್ಯದ ವಿಷಯ ರಾಜ್ಯಗಳಿಗೆ ಸಂಬಂಧಪಟ್ಟದ್ದು, ರಾಜ್ಯಗಳು ಈ ರೀತಿಯ ಸಾವುಗಳ ಬಗ್ಗೆ ವರದಿ ನೀಡಿಲ್ಲ ಎಂಬ ಪಲಾಯನವಾದವು ಸರ್ಕಾರದ ಮೇಲಿನ ಜನರ ವಿಶ್ವಾಸ, ನಂಬಿಕೆಯನ್ನು ಹುಸಿಯಾಗಿಸುತ್ತದೆ.

ಅನೇಕ ರಾಜ್ಯಗಳಲ್ಲಿ ಆಮ್ಲಜನಕದ ಕೊರತೆಯಿಂದ ಸೋಂಕಿತರು ಸಾವನ್ನಪ್ಪಿರುವ ಬಗ್ಗೆ ಬಹಳಷ್ಟು ವರದಿಗಳಾಗಿವೆ. ಕರ್ನಾಟಕದಲ್ಲೂ ಚಾಮರಾಜನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಆಮ್ಲಜನಕದ ಕೊರತೆಯಿಂದ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎಂಬುದು ತಿಳಿಯದಿರುವ ವಿಷಯವೇನಲ್ಲ. ಕೊರೊನಾದ ವಿರುದ್ಧ ಇಡೀ ದೇಶ ಒಂದಾಗಿ ಹೋರಾಟ ನಡೆಸುತ್ತಿದೆ ಎಂದು ಪ್ರಧಾನಿ ಹೇಳುತ್ತಾರೆ. ಆದರೆ ಇನ್ನೊಂದು ಕಡೆ, ಆರೋಗ್ಯದ ವಿಚಾರ ರಾಜ್ಯಗಳಿಗೆ ಸಂಬಂಧಪಟ್ಟದ್ದು ಎಂದು ಸಂಸತ್‌ಗೆ ಮಾಹಿತಿ ನೀಡಲಾಗುತ್ತದೆ.ಈ ರೀತಿಯ ದ್ವಂದ್ವ ನಿಲುವು ಸರಿಯಲ್ಲ. ಹಾಗಿದ್ದರೆ ರಾಜ್ಯ ಸರ್ಕಾರಗಳು ಆಮ್ಲಜನಕ ಕೊರತೆಯ ಮಾಹಿತಿಯನ್ನು ನಿಜಕ್ಕೂ ನೀಡಿಲ್ಲವೇ ಅಥವಾ ಆಮ್ಲಜನಕದ ಕೊರತೆಯಿಂದ ಕೋವಿಡ್‌ ರೋಗಿಗಳ ಸಾವು ಎಂಬ ವರದಿಗಳೇ ಸುಳ್ಳೇ? ಇದಕ್ಕೆಲ್ಲ ವಿರೋಧ ಪಕ್ಷಗಳು ಉತ್ತರ ಪಡೆದೇ ತೀರಬೇಕು.⇒ಪ್ರದೀಪ್ ಚಿಕ್ಕಾಟಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT