ADVERTISEMENT

ವಾಚಕರ ವಾಣಿ| ನೋಟಿನ ಸುರಿಮಳೆ ತಂದ ನೆನಪು

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 19:30 IST
Last Updated 25 ಜನವರಿ 2023, 19:30 IST

ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಬಳಿಯ ಮೇಲ್ಸೇತುವೆಯಿಂದ ವ್ಯಕ್ತಿಯೊಬ್ಬರು ಪ್ರಚಾರಕ್ಕೆಂದು ಹಣ ಚೆಲ್ಲಿದ ಸುದ್ದಿ ಓದಿ ನನಗೆ 1979- 80ರಲ್ಲಿ ಹೊಸಪೇಟೆಯಲ್ಲಿ ರಾಷ್ಟ್ರೀಕೃತ ಬ್ಯಾಂಕೊಂದರ ಸೇವೆಯಲ್ಲಿದ್ದಾಗ ‘ಆಗಸದಿಂದ ನೋಟಿನ ಸುರಿಮಳೆ’ ಆದ ಘಟನೆ ನೆನಪಾಯಿತು. ನಮ್ಮ ಬ್ಯಾಂಕ್ ಮೊದಲು ಹೊಸಪೇಟೆಯ ಮೇನ್ ಬಜಾರಿನ ಹಳೆಯ ಕಟ್ಟಡವೊಂದರಲ್ಲಿ ಮೊದಲ ಮಹಡಿಯ ಮೇಲಿತ್ತು. ಆ ಒಂದು ದಿನ ಪಾದರಕ್ಷೆ ವ್ಯಾಪಾರಿಯೊಬ್ಬರು ಬ್ಯಾಂಕಿನಿಂದ ₹ 2000 ಮೌಲ್ಯದ ಡ್ರಾಫ್ಟ್ ಪಡೆಯಲು ₹ 50ರ ನೋಟಿನ ಎರಡು ಕಂತೆ ಹಾಗೂ ₹ 10ರ ನೋಟಿನ ಒಂದು ಕಂತೆಯನ್ನು ತಮ್ಮ ಕರವಸ್ತ್ರದಲ್ಲಿ ಕಟ್ಟಿಕೊಂಡು ರಸ್ತೆಯಲ್ಲಿ ಬರುತ್ತಿದ್ದರು. ಆಗ ಬ್ಯಾಂಕಿನ ಮೆಟ್ಟಿಲು ಹತ್ತಿ ಬರುತ್ತಿದ್ದ ಅವರ ಕೈಯಲ್ಲಿದ್ದ ಕರವಸ್ತ್ರದ ಗಂಟನ್ನು ಮಂಗವೊಂದು ಕ್ಷಣಾರ್ಧದಲ್ಲಿ ಕಸಿದುಕೊಂಡು ಕಟ್ಟಡದ ಮೇಲಕ್ಕೆ ಓಡಿಹೋಯಿತು. ನಾವ್ಯಾರೂ ಬಳಿಗೆ ಹೋಗಲಾರದಷ್ಟು ತುದಿಯಲ್ಲಿ ಕುಳಿತಿದ್ದ ಮಂಗ, ಕರವಸ್ತ್ರ
ಹರಿದು ಹಾಕಿದ್ದಲ್ಲದೆ ನೋಟಿನ ಕಂತೆಗೆ ಹಾಕಿದ್ದ ರಬ್ಬರ್ ಬ್ಯಾಂಡ್ ಕಿತ್ತು ಹಾಕಿತು. ಕೂಡಲೇ ರಸ್ತೆಯಲ್ಲಿ ನೋಟುಗಳ ಮಳೆ.

ಬಹುಮಹಡಿ ಕಟ್ಟಡದಿಂದ ಬೀಳುವ ನೋಟುಗಳು ಗಾಳಿಗೆ ಅತ್ತಿಂದಿತ್ತ ತೇಲಾಡುತ್ತಿದ್ದಾಗ, ರಸ್ತೆಯಲ್ಲಿಹೋಗುತ್ತಿದ್ದವರು ಬ್ಯಾಂಕಿನ ಹಣ ಎಂದು ಬಾಚಿಕೊಂಡು ಜೇಬಿಗೆ ಸೇರಿಸಿದರು. ಇನ್ನು ಕೆಲವರು, ‘ಅದು ಬಡ ಗ್ರಾಹಕನ ಹಣ, ವಾಪಸ್‌ ಕೊಡಿ’ ಎಂಬ ನಮ್ಮ ಕರೆಗೆ ಅಷ್ಟಿಷ್ಟು ಸಂಗ್ರಹಿಸಿ ಒಂದು ಸಾವಿರದಷ್ಟು ಹಣವನ್ನು ಆ ನತದೃಷ್ಟನಿಗೆ ಮರಳಿಸಿದರು. ಅದೇ ದಿನ ಪ್ರಧಾನಿ ಚೌಧರಿ ಚರಣಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮರುದಿನ ಪತ್ರಿಕೆಯೊಂದರಲ್ಲಿ ‘ಚರಣ್‌ಸಿಂಗ್ ಅವರ ರಾಜೀನಾಮೆಯಿಂದಾಗಿ ಆಗಸದಿಂದ ನೋಟಿನ ಸುರಿಮಳೆಗರೆದ ಮಂಗಗಳು’ ಎಂದು ಬರೆದಿದ್ದುದು ಇನ್ನೂ ನೆನಪಿದೆ.

– ರಘುನಾಥರಾವ್ ತಾಪ್ಸೆ, ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.