ADVERTISEMENT

ವಾಚಕರ ವಾಣಿ| ಗುರು–ಶಿಷ್ಯನ ಅಭಿನಂದನಾರ್ಹ ನಡೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 20:30 IST
Last Updated 29 ನವೆಂಬರ್ 2022, 20:30 IST

ತರಗತಿಯಲ್ಲಿ ತನ್ನನ್ನು ‘ಕಸಬ್’ ಎಂದು ಕರೆದ ಪ್ರಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡ ಮಣಿಪಾಲದ ಎಂಐಟಿ ವಿದ್ಯಾರ್ಥಿ ಪಿ.ಹಮ್ಜ, ಅವರಿಂದ ಕ್ಷಮೆಯಾಚನೆಯ ನಂತರ ವಿವಾದವನ್ನು ಅಂತ್ಯಗೊಳಿಸಿದ್ದು ಆತನ ಪ್ರೌಢ ನಡೆಯನ್ನು ತೋರಿಸುತ್ತದೆ. ದೇಶದಲ್ಲಿ ಕ್ಷುಲ್ಲಕ ವಿಷಯಗಳು ಕೋಮು ಸೌಹಾರ್ದ ಕದಡಲು ಬಳಕೆಯಾಗುತ್ತಿರುವ ಈ ಸಂದರ್ಭದಲ್ಲಿ, ಪ್ರಾಧ್ಯಾಪಕ ರವೀಂದ್ರನಾಥ್‍ ಅವರು ತಮ್ಮ ತಮಾಷೆಯು ಪ್ರಮಾದಕರವಾಗಿದ್ದನ್ನು ಕೂಡಲೇ ಮನಗಂಡು ವಿದ್ಯಾರ್ಥಿಯ ಬಳಿ ಕ್ಷಮೆಯಾಚಿಸಿದ್ದು ಕೂಡಾ ಅನುಕರಣಾರ್ಹ.

ಮಾತುಗಳು ನಮ್ಮ ಯೋಚನಾ ಲೋಕದ ಪ್ರತಿಫಲನಗಳು ಮತ್ತು ಲೋಕ ಗ್ರಹಿಕೆಯ ಉತ್ಪನ್ನ. ಸಾಮಾಜಿಕ ಪ್ರಾಣಿ ಯಾಗಿರುವ ಮಾನವನ ಪ್ರತಿಯೊಂದೂ ಆಲೋಚನೆ, ವರ್ತನೆ, ನಡವಳಿಕೆಯು ಆಯಾ ಸಾಮಾಜಿಕ ಸನ್ನಿವೇಶದ ಒಟ್ಟು ಪರಿಸ್ಥಿತಿಗಳನ್ನು ಆಧರಿಸಿ ಅಭಿವ್ಯಕ್ತಗೊಳ್ಳುತ್ತವೆ. ಇದೆಲ್ಲಾ ಏನೇ ಇದ್ದರೂ ಹಮ್ಜ ಮತ್ತು ರವೀಂದ್ರನಾಥ್‍ ಅವರು ತಮ್ಮ ನಡುವಿನ ವಿವಾದವನ್ನು ಅಂತ್ಯಗೊಳಿಸಿಕೊಂಡದ್ದು ಸಂತೋಷಕರವಷ್ಟೇ ಅಲ್ಲ, ಮಾದರಿ ನಡೆಯೂ ಹೌದು.

- ಅಯ್ಯಪ್ಪ ಹೂಗಾರ್,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.