ADVERTISEMENT

ವಾಚಕರ ವಾಣಿ| ಹೇಳಿಕೆಗೆ ವ್ಯತಿರಿಕ್ತವಾದ ವಾಸ್ತವ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 19:30 IST
Last Updated 27 ಜನವರಿ 2023, 19:30 IST

ಪದ್ಮಭೂಷಣ ಪುರಸ್ಕಾರ ದೊರಕಿದ್ದಕ್ಕೆ ಜಿಲ್ಲಾಡಳಿತದಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ
ಮಾತನಾಡಿದ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರು, ‘2024 ಹಾಗೂ 2029ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ಅವರು ಹೆಚ್ಚೆಚ್ಚು ಬಹುಮತದಿಂದ ಗೆಲ್ಲಬೇಕು. ನಂತರ ನಿವೃತ್ತಿಗೊಳ್ಳಬೇಕು. ಅಲ್ಲಿಯವರೆಗೆ, ಅವರಂತೆಯೇ ಇರುವವರನ್ನು ತಯಾರು ಮಾಡಬೇಕು’ ಎಂದು ಹೇಳಿರುವುದು (ಪ್ರ.ವಾ., ಜ. 27) ಅನಿರೀಕ್ಷಿತವೇನಲ್ಲ ಹಾಗೂ ಭಾರತದಂತಹ ಬಹುತ್ವವನ್ನುಳ್ಳ ದೇಶದ ನಾಯಕತ್ವದ ಬಗೆಗಿನ ಅವರ ಸೈದ್ಧಾಂತಿಕ ನೆಲೆ ಏನು ಎಂಬುದನ್ನು ಸೂಚಿಸುವಂತಹುದಾಗಿದೆ.

‘ಮೋದಿ ಕಾರಣದಿಂದಲೇ ನನಗೆ ಪುರಸ್ಕಾರ ದೊರೆತಿದೆ. ಇಲ್ಲದಿದ್ದರೆ ಬರುತ್ತಿರಲಿಲ್ಲ...’ ಎಂದು ಭೈರಪ್ಪ ಹೇಳಿರುವುದು ಗಮನಾರ್ಹ! ‘ಈಗ ದೇಶ ಬಹಳ ಪ್ರಗತಿ ಸಾಧಿಸಿದೆ’ ಎಂಬ ಅವರ ಹೇಳಿಕೆಗೆ ವ್ಯತಿರಿಕ್ತವಾದ ಅಂಕಿ ಅಂಶಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ನೋಡುತ್ತಲೇ ಇದ್ದೇವೆ. ಉದಾಹರಣೆಗೆ, ಆಕ್ಸ್‌ಫಾಮ್ ಎಂಬ ಸಂಸ್ಥೆ ತನ್ನ ‘ಸರ್ವೈವಲ್ ಆಫ್ ದಿ ರಿಚೆಸ್ಟ್: ದಿ ಇಂಡಿಯಾ ಸ್ಟೋರಿ’ ಎಂಬ ವರದಿಯಲ್ಲಿ, ಭಾರತದ ಜನಸಂಖ್ಯೆಯ
ಶೇ 1ರಷ್ಟು ಮಂದಿ ಇಡೀ ದೇಶದ ಸಂಪತ್ತಿನ ಶೇ 40ರಷ್ಟನ್ನು ಪಡೆದಿದ್ದಾರೆ, 70 ಕೋಟಿ ಜನರು ಪಡೆದಿರುವ ಐಶ್ವರ್ಯಕ್ಕೆ ಸಮಾನವಾದ ಐಶ್ವರ್ಯವನ್ನು 21 ಮಂದಿ ಹೊಂದಿದ್ದಾರೆ, ದೇಶದ ಒಟ್ಟು ಜನಸಂಖ್ಯೆಯ ಶೇ 50ರಷ್ಟು ಮಂದಿ ಪಡೆದಿರುವುದು ಶೇ 3ರಷ್ಟು ಸಂಪತ್ತು ಮಾತ್ರ ಎಂದೆಲ್ಲಾ ಗುರುತಿಸಿದೆ.

ನಿರುದ್ಯೋಗ ಪ್ರಮಾಣ ಏರುತ್ತಲೇ ಇದೆ. ಬೆಲೆ ಏರಿಕೆ ಮಿತಿಮೀರಿದೆ. ದೇಶದ ಸಾಲ 2014ರಲ್ಲಿ ಸರಿಸುಮಾರು
₹ 45 ಲಕ್ಷ ಕೋಟಿ ಇದ್ದದ್ದು 2021ರ ಮಾರ್ಚ್ ವೇಳೆಗೆ ₹ 147 ಲಕ್ಷ ಕೋಟಿ. ವಸೂಲಾಗದ ಸಾಲ (ಎನ್‌ಪಿಎ) ₹ 66.5 ಲಕ್ಷ ಕೋಟಿ. ಕಳೆದ ಐದು ವರ್ಷಗಳಲ್ಲಿ ಬ್ಯಾಂಕ್‌ಗಳು ರೈಟ್ ಆಫ್ ಮಾಡಿದ ಸಾಲ ಸುಮಾರು ₹ 10 ಲಕ್ಷ ಕೋಟಿ! ಮೇಲೆಲ್ಲ ಥಳುಕು ಒಳಗೆಲ್ಲ ಹುಳುಕು ಎಂಬಂತಾಗಿದೆ ನಮ್ಮ ದೇಶದ ಪರಿಸ್ಥಿತಿ!

ADVERTISEMENT

- ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.