ADVERTISEMENT

ಗಂಡು ಜಾತಿಯ ದೌರ್ಜನ್ಯದ ಪ್ರತೀಕ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 20:00 IST
Last Updated 15 ನವೆಂಬರ್ 2018, 20:00 IST

ಮೀ ಟೂ ಅಭಿಯಾನದಡಿ ತಾನು ಮಾಡಿದ್ದ ಆಪಾದನೆಗಳಿಗಾಗಿ ಕನ್ನಡದ ನಟಿ ಸಂಜನಾ ಅವರು ನಿರ್ದೇಶಕರಲ್ಲಿ ಬಹಿರಂಗ ಕ್ಷಮೆ ಕೇಳಿದ ಸುದ್ದಿಯನ್ನು ಓದಿ ಆಘಾತಕ್ಕಿಂತ ಸಂಕಟವಾಯಿತು.

ಅಪರೂಪಕ್ಕೆ ಸಿಡಿದು ನಿಂತ ಹೆಣ್ಣಿನ ದನಿಯನ್ನು ಕೇಳಲು ಗಂಡು ಕುಲವು ಬಿಲ್‌ಕುಲ್ ಒಪ್ಪುವುದಿಲ್ಲ. ಅದೇನಿದ್ದರೂ ಹೆಣ್ಣಿನ ದೈನ್ಯತೆ, ಅಸಹಾಯಕತೆ, ಅವಲಂಬನೆ, ಯಾಚನೆ, ಶರಣಾಗತಿ, ಸಮ್ಮತಿ, ಸಹಕಾರಗಳನ್ನಷ್ಟೇ ನಿರೀಕ್ಷಿಸುತ್ತದೆ. ಅಂತಹ ಗಂಡು ಆಧಿಪತ್ಯ, ದೌರ್ಜನ್ಯ ಧೋರಣೆಯನ್ನು ಮೆಟ್ಟಿ ನಿಲ್ಲುವುದು ಹೆಣ್ಣಿಗೆ ಸುಲಭ ಕೆಲಸವಲ್ಲ. ಅದರ ವಿರುದ್ಧ ಪ್ರತಿಭಟನೆ ಮಾಡುವುದೂ ಸಾಮಾನ್ಯ ಕೆಲಸವಲ್ಲ. ಬಂಡಾಯವೇಳುವ ಹೆಣ್ಣನ್ನು ತುಳಿಯುವ, ಹತ್ತಿಕ್ಕುವ ಪ್ರಯತ್ನವನ್ನು ಗಂಡು ಸಮಾಜ ಮಾಡುವುದು ನಿರೀಕ್ಷಿತವೇ.

ನೊಂದ ಹೆಣ್ಣಿನ ದೂರನ್ನಾಗಲೀ ನೋವಿನ ಧ್ವನಿಯನ್ನಾಗಲೀ ಕೇಳಿಸಿಕೊಳ್ಳಲಾಗದಷ್ಟು ಅಸಹನೆ ಗಂಡು ಕುಲದ್ದು. ಬಹಿರಂಗ ಕ್ಷಮೆ ಕೇಳುವಂತೆ ಸಂಜನಾ ಅವರ ‘ಮನವೊಲಿಸಿದ’ ಚಿತ್ರರಂಗದ ಗಣ್ಯರು, ಆಕೆ ಕ್ಷಮೆ ಕೇಳಿದ್ದರಿಂದ ತಾನು ನಿರ್ದೋಷಿಯೂ, ನಿರಪರಾಧಿಯೂ ಆಗಿಬಿಟ್ಟೆನೆಂಬ ಭ್ರಮೆಯಲ್ಲಿರುವ, ತನ್ನಿಂದ ತಪ್ಪಾಗಿದ್ದರೆ ಕ್ಷಮಿಸಿಬಿಡಿ ಎಂದು ಕೇಳುವಷ್ಟು ಸೌಜನ್ಯವೂ ಇಲ್ಲದ ನಿರ್ದೇಶಕರೂ ಸಂವೇದನಾರಹಿತ ಗಂಡು ಜಾತಿಯ ದೌರ್ಜನ್ಯದ ಪ್ರತೀಕಗಳಾಗಿ ನಿಲ್ಲುತ್ತಾರೆ. ತಮಗಾದ ಅನ್ಯಾಯವನ್ನು ಬಹಿರಂಗವಾಗಿ ಹಂಚಿಕೊಂಡ ನಟಿಯರಾದ ಶ್ರುತಿ ಹರಿಹರನ್ ಆಗಲೀ, ಸಂಜನಾ ಆಗಲೀ ಸಹೃದಯರ, ಮಾನವೀಯತೆಯುಳ್ಳ ಜನರ ಬೆಂಬಲಕ್ಕೆ ಖಂಡಿತ ಅರ್ಹರು. ಕೊನೆಯಪಕ್ಷ ಈ ಹೆಣ್ಣುಮಕ್ಕಳ ಧ್ವನಿ ಅಡಗಿಸದೆ ಅವರ ನೋವಿಗೆ ಕಿವಿಗೊಡುವ, ಸ್ಪಂದಿಸುವ ಕರ್ತವ್ಯ ಯಾವುದೇ ಸುಶಿಕ್ಷಿತ ‘ಮನುಷ್ಯ’ ಸಮಾಜಕ್ಕೆ ಇರಬೇಕಾದ ಮೂಲಭೂತ ಗುಣ.

ADVERTISEMENT

-ಚಂದನ್, ಚನ್ನಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.