ADVERTISEMENT

ಸಾಹಿತ್ಯ ಸಮ್ಮೇಳನದಲ್ಲಿ ರಸಪ್ರಶ್ನೆ

ನಾಗೇಶ ಹೆಗಡೆ
Published 4 ಡಿಸೆಂಬರ್ 2018, 20:15 IST
Last Updated 4 ಡಿಸೆಂಬರ್ 2018, 20:15 IST
ಡಾ. ಚಂದ್ರಶೇಖರ ಕಂಬಾರ
ಡಾ. ಚಂದ್ರಶೇಖರ ಕಂಬಾರ   

ಧಾರವಾಡದ ಸಾಹಿತ್ಯ ಸಮ್ಮೇಳನಕ್ಕೆಂದು ಡಾ. ಕಂಬಾರರು ಈಗಲೇ ತಮ್ಮ ಅಧ್ಯಕ್ಷೀಯ ಭಾಷಣವನ್ನು ಸಿದ್ಧಮಾಡುತ್ತಿರಬಹುದು. ಹಿಂದಿನ ಬಹುತೇಕ ಎಲ್ಲ ಅಧ್ಯಕ್ಷರೂ ತಮ್ಮ ಭಾಷಣವನ್ನು ಸಮ್ಮೇಳನದ ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಿರುವಾಗ ಜನರು ಚಡಪಡಿಸುವುದನ್ನು, ಊಟಕ್ಕೆ ಸರದಿ ನಿಲ್ಲಲೆಂದು ಧಾವಿಸುವುದನ್ನು, ವೇದಿಕೆಯಲ್ಲಿ ಕೂತಿದ್ದವರೂ ಆಕಳಿಸುವುದನ್ನು ನಾವು ನೋಡಿದ್ದೇವೆ. ಸುದೀರ್ಘಮೆರವಣಿಗೆಯಲ್ಲಿ ಪಾಲ್ಗೊಂಡು ಸುಸ್ತಾದವರು ತೂಕಡಿಸುವುದೂ ಸಹಜ. ಹಾಗಾಗುವುದನ್ನು ತಪ್ಪಿಸಲು ನನ್ನದೊಂದು ಸಲಹೆ ಇದೆ:

ಅಧ್ಯಕ್ಷರ ಭಾಷಣ 20–30 ಪುಟಗಳಿದ್ದರೂ ಅವರು ಅದರ ಸಾರಾಂಶವನ್ನು 20–30 ನಿಮಿಷಗಳಲ್ಲಿ ಮುಗಿಸಬೇಕು. ಆದರೆ ಅವರ ಲಿಖಿತ ಭಾಷಣವನ್ನು ಎಲ್ಲರೂ ಓದುವಂತೆ ಮಾಡಬೇಕು. ಅದಕ್ಕೆ ಸರಳ ಉಪಾಯವಿದೆ. ಮಾರನೆಯ ದಿನ, ಅಥವಾ ಮೂರನೆಯ ದಿನ ಆ ಇಡೀ ಲಿಖಿತ ಭಾಷಣವನ್ನು ಆಧರಿಸಿ ಒಂದು ರಸಪ್ರಶ್ನೆ ಪರೀಕ್ಷೆ ನಡೆಸಬೇಕು. ಇಪ್ಪತ್ತು ಪ್ರಶ್ನೆಗಳ, ನೂರು ಅಂಕಗಳ ಬಹುಆಯ್ಕೆಯ ಪ್ರಶ್ನೆ ಪತ್ರಿಕೆ ಆಗಿದ್ದರೆ ಇಡೀ ಪರೀಕ್ಷೆ ಮತ್ತು ಮೌಲ್ಯಮಾಪನವನ್ನು ಒಂದು ಗಂಟೆಯ ಅವಧಿಯಲ್ಲಿ ಮುಗಿಸಲು ಸಾಧ್ಯವಿದೆ. ಸಭಿಕರಲ್ಲಿ ಬಹುಪಾಲು ಶಿಕ್ಷಕರೇ ಆಗಿರುವುದರಿಂದ ಮತ್ತು ಅವರೆಲ್ಲರಿಗೆ ಒಒಡಿ ಸೌಲಭ್ಯದ ಶಿಫಾರಸು ಬೇಕಾಗಿರುವುದರಿಂದ, ಈ ಪರೀಕ್ಷೆಯಲ್ಲಿ 50 ಅಂಕ ಗಳಿಸಿದವರಿಗೆ ಮಾತ್ರ ಅಂಥ ಸರ್ಟಿಫಿಕೇಟ್ ಕೊಡಬೇಕು. ನೂರಕ್ಕೆ ನೂರು ಅಂಕ ಗಳಿಸಿದ ಹತ್ತು ಸಭಿಕರಿಗೆ (ಯಾರೇ ಆಗಿರಲಿ) ಕೊನೆಯ ದಿನ ಬಹುಮಾನ ಮತ್ತು/ಅಥವಾ ಮಾನ್ಯತಾ ಪತ್ರ ಕೊಡುವ ವ್ಯವಸ್ಥೆ ಮಾಡಬೇಕು.

ಅಲ್ಲಿಗೆ, ಸಮ್ಮೇಳನದಲ್ಲಿ ಭಾಗವಹಿಸಿದ ಬಹುಪಾಲು ಜನರಿಗೆ ಅಧ್ಯಕ್ಷರ ಮಾತಿನ ಗ್ರಹಿಕೆ ಮಾಡಿಸಿದಂತಾಗುತ್ತದೆ. ಸುದೀರ್ಘ ಭಾಷಣದ ಏಕತಾನತೆಯನ್ನೂ ತಪ್ಪಿಸಿದಂತಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.