ADVERTISEMENT

ಸರ್ಕಾರಕ್ಕೆ ಇಚ್ಛಾಶಕ್ತಿ ಇದೆಯೇ?

ಶಂಕರಗೌಡ ಬಿರಾದಾರ  ಮುಳಸಾವಳಗಿ
Published 10 ಡಿಸೆಂಬರ್ 2018, 20:15 IST
Last Updated 10 ಡಿಸೆಂಬರ್ 2018, 20:15 IST

‘ಪಡಿತರ ವಿತರಣೆ ಮಾಫಿಯಾ’ (ಒಳನೋಟ, ಪ್ರ.ವಾ., ಡಿ.9) ವರದಿಯು ನಮ್ಮ ಪಡಿತರ ವ್ಯವಸ್ಥೆಯ ಕರಾಳ ಮುಖವನ್ನು ಬಯಲು ಮಾಡಿದೆ. ಬಡತನವನ್ನೇ ಬಂಡವಾಳ ಮಾಡಿಕೊಂಡು ಕಾನೂನನ್ನೇ ವಂಚನೆಗೆ ಗುರಾಣಿಯನ್ನಾಗಿ ಬಳಸುತ್ತಿರುವ ಜಾಲದ ಕಪಿಮುಷ್ಟಿಯಲ್ಲಿ ಸಿಲುಕಿರುವ ಪಡಿತರ ವ್ಯವಸ್ಥೆ ಸರಿಪಡಿಸಲಾಗದಷ್ಟು ಗಬ್ಬೆದ್ದು ಹೋಗಿದೆ. ವಂಚಕರ ಜಾಲವು ಬಡವರ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ನುಂಗಿ ನೀರು ಕುಡಿಯುತ್ತಿದೆ ಎಂಬುದು ಆತಂಕ ಮೂಡಿಸುತ್ತದೆ.

ಪಡಿತರ ಚೀಟಿ ವಿತರಣಾ ವ್ಯವಸ್ಥೆ ಹಳಿ ತಪ್ಪಿ ದಶಕ ಕಳೆದಿದ್ದರೂ ಅದನ್ನು ಸರಿದಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂಬುದೇ ನಾಚಿಕೆಗೇಡಿನ ವಿಚಾರ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಗೊಳಿಸಿರುವ ಮಾನದಂಡ, ಕೇಂದ್ರದ ಆಹಾರ ಭದ್ರತಾ ಕಾಯ್ದೆ, ಸುಪ್ರೀಂ ಕೋರ್ಟ್ ನಿರ್ದೇಶನಗಳು ಮತ್ತು ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳ ಜನಪ್ರಿಯ ಘೋಷಣೆಗಳ ನೆರಳಲ್ಲೇ ಕೆಲಸ ಮಾಡುವ ವಂಚಕರು ಪಡಿತರ ವ್ಯವಸ್ಥೆಯನ್ನು ಮರಳಿ ಹಳಿಗೆ ತರಲು ಬಿಡುತ್ತಿಲ್ಲ. ವ್ಯವಸ್ಥೆಯನ್ನು ವಂಚಕರ ಜಾಲದಿಂದ ಮುಕ್ತಗೊಳಿಸಿ
ಬಡವರಿಗೆ ಆಹಾರ ಭದ್ರತೆಯನ್ನು ಒದಗಿಸುವ ಇಚ್ಛಾಶಕ್ತಿ ನಮ್ಮ ಸರ್ಕಾರಗಳಿಗೆ ಇದೆಯೇ? ಇದ್ದರೆ ಪ್ರದರ್ಶಿಸುವುದು ಯಾವಾಗ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT