ADVERTISEMENT

ರೈಲು ವ್ಯವಸ್ಥೆಯ ಕಾರ್ಯವೈಖರಿ– ಈ ಪರಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಜುಲೈ 2021, 21:27 IST
Last Updated 25 ಜುಲೈ 2021, 21:27 IST

ತೊಂಬತ್ತೈದು ವರ್ಷದ ಅಜ್ಜಿಯ ಜತೆ ಒಂದು ವಾರ ಕಳೆಯಲೆಂದು ಮಲೆನಾಡಿನ ಹಳ್ಳಿಗೆ- ಸಾಗರ ತಾಲ್ಲೂಕು ತಾಳಗುಪ್ಪ ಹೋಬಳಿ ತಡಗಳಲೆ ಗ್ರಾಮಕ್ಕೆ ತೆರಳಿದ್ದ ಮಗಳು, ಅಲ್ಲಿ ಲಭ್ಯವಿದ್ದ ಇಂಟರ್ನೆಟ್ ಕೈಕೊಟ್ಟ ಕಾರಣ ‘ಮನೆಯಿಂದ ಕೆಲಸ’ಕ್ಕೆ ತೊಡಕುಂಟಾಗಿ, ತುರ್ತಾಗಿ ಬೆಂಗಳೂರಿಗೆ ಹಿಂತಿರುಗಲು ತಾಳಗುಪ್ಪದಿಂದ ರೈಲಿಗೆ ಸೀಟು ಕಾದಿರಿಸಿದ್ದಳು. ಅದೂ ಶುಕ್ರವಾರ ಸಂಜೆ 6 ಗಂಟೆಗೆ, ಪಯಣಿಗರ ಪಟ್ಟಿ (ಪ್ಯಾಸೆಂಜರ್ಸ್ ಚಾರ್ಟ್) ಸಿದ್ಧವಾದ ನಂತರ ತತ್ಕಾಲ್ ಸೀಟು ಕಾದಿರಿಸಿದಳು. ರಾತ್ರಿ 8.20ಕ್ಕೆ ತಾಳಗುಪ್ಪದಿಂದ ಹೊರಡುವ ರೈಲಿಗಾಗಿ 7.20ಕ್ಕೆ ವಾಹನದಲ್ಲಿ ಹೋಗುತ್ತಿರುವಾಗ, ಮಾರ್ಗಮಧ್ಯೆ ಫೋನಿನಲ್ಲಿ ಬಂದ ಎಸ್ಎಂಎಸ್ ಸಂದೇಶದ ಮೂಲಕ ‘ಅನಿವಾರ್ಯ ಕಾರಣಗಳಿಂದ ಇಂದಿನ ತಾಳಗುಪ್ಪ– ಬೆಂಗಳೂರು ರೈಲು ರದ್ದಾಗಿದೆ’ ಎಂದು ತಿಳಿಸಲಾಯಿತು.

ಸಾಗರದಲ್ಲಿ ನಮಗೆ ಸಿಕ್ಕ ಮಾಹಿತಿಯ ಪ್ರಕಾರ, ಅಂದು ಸಾಗರಕ್ಕೇ ಆ ಬೆಂಗಳೂರು ರೈಲು ಬಂದಿರಲಿಲ್ಲ ಮತ್ತು ಶಿವಮೊಗ್ಗದಿಂದಲೂ ರೈಲು ಹೊರಡುವುದಿಲ್ಲ ಎಂಬ ಆಘಾತಕಾರಿ ಸುದ್ದಿ ತಿಳಿಯಿತು. ಸಾಗರದಿಂದ ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಅವಳು ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಹೋಗಿಯೂ ಆಯಿತು.

ಪ್ರಶ್ನೆ ಇರುವುದು, ರೈಲು ನಿಗದಿತ ನಿಲ್ದಾಣಕ್ಕೇ ಬಂದಿಲ್ಲದಿದ್ದಾಗ್ಯೂ ಆ ನಿಲ್ದಾಣದಿಂದ ಆನ್‌ಲೈನ್ ಟಿಕೆಟನ್ನು ಹೇಗೆ ಕಾದಿರಿಸಲಾಯಿತು ಎನ್ನುವುದು. ಟಿಕೆಟ್ ಕಾದಿರಿಸುವ ಐಆರ್‌ಸಿಟಿಸಿ ಅವರಿಗೂ ರೈಲ್ವೆ ವ್ಯವಸ್ಥೆಯವರಿಗೂ ಸಂಪರ್ಕ ಕಡಿದು ಹೋಗಿತ್ತೇ ಎನ್ನುವುದು. ರೈಲು ರದ್ದಾದ ಕಾರಣ ಟಿಕೆಟಿನ ಹಣ ಹಿಂತಿರುಗಿಸುವ ಜತೆಯಲ್ಲೇ ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗೆ ರೈಲ್ವೆ ಇಲಾಖೆ ದಂಡವನ್ನೂ ತೆರಬೇಕಾಗಿರುವುದು ನ್ಯಾಯೋಚಿತವಲ್ಲವೇ?

ADVERTISEMENT

- ಟಿ.ಸುರೇಂದ್ರ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.