ADVERTISEMENT

ಪೌರಕಾರ್ಮಿಕರ ಅಲಕ್ಷ್ಯ ಸಾಮಾಜಿಕ ಅಪರಾಧ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಜುಲೈ 2021, 21:31 IST
Last Updated 25 ಜುಲೈ 2021, 21:31 IST

ಆರ್ಥಿಕ ಸಂಕಷ್ಟ ಮತ್ತು ಸಾಂಕ್ರಾಮಿಕದಿಂದ ಹುಟ್ಟಿರುವ ಅಸಹಾಯಕತೆಗಳ ಈ ದಿನಗಳಲ್ಲಿ ಕೋವಿಡ್ ನೆಪವೊಡ್ಡಿ ಎಲ್ಲಿ ನೋಡಿದರೂ ಹಂಗಾಮಿ ನೌಕರಿ, ಗುತ್ತಿಗೆ ನೌಕರಿ, ದಿನಗೂಲಿ ನೌಕರಿ ಇತ್ಯಾದಿಯಾಗಿ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತಿರುವುದು ಮತ್ತು ಆ ಮೂಲಕ ಜನಸಾಮಾನ್ಯರ ಬದುಕುವ ಹಕ್ಕನ್ನೇ ಕಸಿದುಕೊಳ್ಳುತ್ತಿರುವುದು ಮಾಮೂಲಿ ಸಂಗತಿಯಾಗಿಬಿಟ್ಟಿದೆ. ದೊಡ್ಡ ದೊಡ್ಡ ನಗರಗಳ ನಗರಪಾಲಿಕೆಗಳಲ್ಲಿ ಶೋಚನೀಯ ಪರಿಸ್ಥಿತಿಗಳಲ್ಲಿ ಸರಿಯಾದ ಸಂಬಳ- ಸವಲತ್ತುಗಳಿಲ್ಲದೆ ದುಡಿಯುತ್ತಿರುವ ಪೌರಕಾರ್ಮಿಕರ ಸ್ಥಿತಿ ಇನ್ನೂ ಗಂಭೀರ ವಾಗಿದೆ. ಅವರಲ್ಲಿ ಬೆರಳೆಣಿಕೆಯ ಜನರು ಮಾತ್ರ ಕಾಯಂ ನೌಕರರಾಗಿದ್ದು ಬಹುಸಂಖ್ಯಾತ ನೌಕರರು ಹಂಗಾಮಿ ನೌಕರರಾಗಿ ದುಡಿಯುತ್ತಾ ಕನಿಷ್ಠ ಸವಲತ್ತುಗಳಿಂದಲೂ ವಂಚಿತರಾಗಿದ್ದಾರೆ. ಹಣವಂತ ಉದ್ಯಮಿ- ವ್ಯಾಪಾರಿ- ರಾಜಕಾರಣಿಗಳಿಂದ ನಗರಪಾಲಿಕೆಗಳಿಗೆ ನ್ಯಾಯವಾಗಿ ಬರಬೇಕಾದ ತೆರಿಗೆಗಳನ್ನು ವಸೂಲು ಮಾಡದೆ, ಆರ್ಥಿಕ ಮಿತವ್ಯಯದ ಹೆಸರಿನಲ್ಲಿ ಈ ಬಡಪಾಯಿ ನೌಕರರನ್ನು ನಿರ್ದಯವಾಗಿ ಕೆಲಸದಿಂದ ತೆಗೆದುಹಾಕಲಾಗುತ್ತಿದೆ.

ಪೌರಕಾರ್ಮಿಕರಲ್ಲಿ ಕಾಯಂ ಮತ್ತು ಹಂಗಾಮಿ ಎಂದು ಭೇದ ಮಾಡಿ ಹಂಗಾಮಿ ನೌಕರರನ್ನು ಕೆಲಸದಿಂದ ತೆಗೆದುಹಾಕುವ ಕ್ರಮ ಅಮಾನವೀಯ ಮಾತ್ರವಲ್ಲ, ಅವಿವೇಕದ್ದೂ ಹೌದು. ಜನಜೀವನದ ನಾಗರಿಕ ಆರೋಗ್ಯದ ಮುಖ್ಯ ಅಂಗದಂತಿರುವ ಪೌರಕಾರ್ಮಿಕರ ಬಗ್ಗೆ ತಾತ್ಸಾರ ಭಾವನೆಯನ್ನು ಆಳುವವರು ಮತ್ತು ಅಧಿಕಾರಿಗಳು ಬೆಳೆಸಿಕೊಂಡರೆ ಅವರ ಅಸ್ತಿತ್ವಕ್ಕೇ ಸಂಚಕಾರ ಬರುವುದರಲ್ಲಿ ಸಂದೇಹವಿಲ್ಲ.

ಸಮಾಜದ ಅತ್ಯಂತ ಕೆಳಸ್ತರದಲ್ಲಿರುವ ಪೌರಕಾರ್ಮಿಕರ ವಿಷಯದಲ್ಲಿ ಹಂಗಾಮಿ ಎನ್ನುವುದೇ ಒಂದು ಅಸಂಬದ್ಧವಾದ ಆಲೋಚನೆ. ಈಗಿರುವ 5,000 ಜನರಿಗೆ ಒಬ್ಬ ಪೌರಕಾರ್ಮಿಕ ಎಂಬ ಅನುಪಾತವನ್ನು ಬದಲಾಯಿಸಿ, ಕಡೇಪಕ್ಷ 1,000 ಜನರಿಗೆ ಒಬ್ಬ ಪೌರಕಾರ್ಮಿಕ ಎಂಬ ಅನುಪಾತದಲ್ಲಿ ಪೌರಕಾರ್ಮಿಕರನ್ನು ನೇಮಿಸಿಕೊಂಡು ಅವರೆಲ್ಲರಿಗೂ ತಿಂಗಳಿಗೆ ₹ 25,000 ಕನಿಷ್ಠ ವೇತನವನ್ನು ಕೊಡುವುದು ಎಲ್ಲಾ ದೃಷ್ಟಿಯಿಂದಲೂ ನ್ಯಾಯ.⇒ವಿ.ಎನ್.ಲಕ್ಷ್ಮೀನಾರಾಯಣ,ಮೈಸೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.