ADVERTISEMENT

ವಾಚಕರ ವಾಣಿ | ಶಾಲಾ ಕೊಠಡಿ ಬಣ್ಣ: ವಿವೇಕದ ಸ್ಪರ್ಶವಿರಲಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 17:35 IST
Last Updated 15 ನವೆಂಬರ್ 2022, 17:35 IST

ರಾಜ್ಯದ ಸರ್ಕಾರಿ ಶಾಲೆಗಳ ನೂತನ ಕೊಠಡಿ ನಿರ್ಮಾಣ ಯೋಜನೆಗೆ ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ‘ವಿವೇಕ’ ಎಂದು ಹೆಸರಿಡುವುದು ಹಾಗೂ ಕೇಸರಿ ಬಣ್ಣದಿಂದ ಗೋಡೆಗಳನ್ನು ಅಲಂಕರಿಸುವ ಸರ್ಕಾರದ ಚಿಂತನೆಗೆ ಟೀಕೆಗಳು ಕೇಳಿಬರುತ್ತಿವೆ. ವಿಷಯವು ರಾಜಕೀಯ ವಿವಾದದ ಸ್ವರೂಪ ಪಡೆಯುತ್ತಿರುವುದು ಅಪೇಕ್ಷಣೀಯವಲ್ಲ. ಕರ್ನಾಟಕದ ಗ್ರಾಮೀಣ ಭಾಗಗಳಷ್ಟೇ ಅಲ್ಲ, ದೊಡ್ಡ ನಗರಗಳಲ್ಲೂ ಸರ್ಕಾರಿ ಶಾಲೆಗಳ ಸ್ಥಿತಿಗತಿ ಹೇಗಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲೋ ಬೆರಳೆಣಿಕೆಯಷ್ಟು ಬಿಟ್ಟರೆ ಉಳಿದಂತೆ ಸರ್ಕಾರಿ ಶಾಲೆಗಳೆಂದರೆ ಪಾಲಕರು ಮತ್ತು ಮಕ್ಕಳು ಹೆದರುವಂತಾಗಿದೆ. ಹಲವಾರು ಶಾಲೆಗಳು ಈಗಲೋ ಆಗಲೋ ಬೀಳುವಂತಿವೆ.

ರಾಜ್ಯದಾದ್ಯಂತ ಏಕಕಾಲಕ್ಕೆ ಸಾವಿರಾರು ಹೊಸ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಅಡಿಗಲ್ಲು ಇಡುತ್ತಿರುವ ಸಂಗತಿ ಸಮಾಧಾನಕರ. ಈ ಶಾಲೆಗಳ ಗೋಡೆಗಳಿಗೆ ಉಪಯೋಗಿಸುವ ಬಣ್ಣವು ಪ್ರಧಾನ ಅಂಶವಾಗಬಾರದು. ವಿವೇಕಾನಂದರು ತೊಡುತ್ತಿದ್ದ ಉಡುಗೆಯ ಬಣ್ಣವೆಂಬ ಕಾರಣಕ್ಕೆ ವಿವೇಕ ಯೋಜನೆ ಶಾಲೆಗಳ ಗೋಡೆಗಳು ಕೇಸರಿಮಯ ಆಗಿರಬೇಕೆಂದಿಲ್ಲ. ಹಾಗೆಯೇ ಕೇಸರಿ ಎನ್ನುವ ಕಾರಣಕ್ಕೆ ವಿರೋಧಿಸಬೇಕೆಂದೂ ಇಲ್ಲ. ಮುಖ್ಯವಾಗಿ ಮಕ್ಕಳಿಗೆ ಸುಭದ್ರ, ಸುರಕ್ಷಿತ ವಾತಾವರಣದಲ್ಲಿ ಶಿಕ್ಷಣ ದೊರೆಯಬೇಕಾದ ಸಂದರ್ಭವಿದು. ಇದು ವಿವಾದವಾಗದಂತೆ, ಬಣ್ಣದಿಂದಾಗಿ ಮಕ್ಕಳ ಮನಸ್ಸುಗಳ ನಡುವೆ ಗೋಡೆ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು.
ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT