ADVERTISEMENT

ವಾಚಕರ ವಾಣಿ | ಕೆಪಿಎಸ್‌ಸಿ: ಹಳೆ ಮದ್ಯ ಹೊಸ ಬಾಟಲಿ?

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 18:39 IST
Last Updated 17 ನವೆಂಬರ್ 2022, 18:39 IST

ಭ್ರಷ್ಟಾಚಾರದಿಂದ ಅಪಖ್ಯಾತಿಗೆ ಒಳಗಾಗಿರುವ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ತನ್ನ ಇತ್ತೀಚಿನ ಕೆಲವು ಬದಲಾವಣೆಗಳಿಂದ ತುಸು ಸುಧಾರಣೆ ಕಾಣುವ ಭರವಸೆ ಮೂಡಿಸಿತ್ತು. ಆದರೆ ‘ಹಳೆ ಮದ್ಯ ಹೊಸ ಬಾಟಲಿ’ ಎಂಬಂತೆ ತನ್ನ ಮೂಲ ರೂಪವನ್ನು ಅದು ಬದಲಾಯಿಸಿಯೇ ಇಲ್ಲ ಅನಿಸುತ್ತದೆ. ಮುಂದಿನ ದಿನಗಳಲ್ಲಿ ಮತ್ತು ಹಾಲಿ ನಡೆದಿರುವ ಪರೀಕ್ಷೆಗಳಿಗೆ ಕಟ್ಟುನಿಟ್ಟಾದ ನಿಯಮ ಜಾರಿಗೊಳಿಸಿ ಚುರುಕು ಮುಟ್ಟಿಸುವುದಾಗಿ ಆಯೋಗವು ಮಾಧ್ಯಮಗಳ ಮೂಲಕ ಆಶ್ವಾಸನೆ ನೀಡಿತ್ತು. ಈ ಸಂಬಂಧ ತಾತ್ಕಾಲಿಕ ವೇಳಾಪಟ್ಟಿಯನ್ನುಸಹ ಪ್ರಕಟಿಸಿತು. ಆದರೆ ಈ ವೇಳಾಪಟ್ಟಿಯು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿ, ಯಾವುದೇ ಗಮನಾರ್ಹ ಬೆಳವಣಿಗೆ ಆಗದೇ ಇರುವುದು ದುರದೃಷ್ಟಕರ.

ಎಸ್‌ಡಿಎ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆದು ವರ್ಷಗಳೇ ಕಳೆದಿವೆ. ಈ ಸಂಬಂಧ ಆಯೋಗವೇ ಬಿಡುಗಡೆಗೊಳಿಸಿದ ವೇಳಾಪಟ್ಟಿಯಂತೆ ಈಗ ಆಯ್ಕೆಪಟ್ಟಿ ಪ್ರಕಟವಾಗಬೇಕಿತ್ತು. ಈ ಕಡತವನ್ನು ಇನ್ನೂ ತನ್ನ ಆಂತರಿಕ ಸಮಿತಿಯ ಮುಂದೆ ಮಂಡಿಸಿಯೇ ಇಲ್ಲ ಎಂದು ಆಯೋಗ ಸಮಾಜಾಯಿಷಿ ನೀಡುತ್ತಿದೆ. ಈ ಕಡತವನ್ನು ಅದು ಇನ್ನೂ ಎಷ್ಟು ವರ್ಷಗಳ ಕಾಲ ತನ್ನ ಬಳಿಯೇ ಇಟ್ಟುಕೊಳ್ಳಲು ಬಯಸುತ್ತದೆ? ವಯೋಮಿತಿ ಮೀರುತ್ತಿರುವ ನಿರುದ್ಯೋಗಿಗಳ ವೇದನೆ ಆಯೋಗಕ್ಕೆ ಅರ್ಥವಾಗುತ್ತಿಲ್ಲ. ಇಂತಹ ವಿಳಂಬ ನೀತಿಯೂ ಭ್ರಷ್ಟಾಚಾರವೇ ಅಲ್ಲವೆ?
ಸುಜ್ಜಲೂರು ವಿಜಿ,ವಾಟಾಳು, ಟಿ. ನರಸೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT