ADVERTISEMENT

ವಾಚಕರ ವಾಣಿ: ಲಸಿಕೆ ಗೊಂದಲ ನಿವಾರಿಸಿ

​ಪ್ರಜಾವಾಣಿ ವಾರ್ತೆ
Published 3 ಮೇ 2021, 19:45 IST
Last Updated 3 ಮೇ 2021, 19:45 IST

ಹಿರಿಯ ನಾಗರಿಕರು ಕೊರೊನಾ ಎರಡನೇ ಡೋಸ್ ಲಸಿಕೆ ಪಡೆಯಲು ಬವಣೆ ಪಡುತ್ತಿರುವುದನ್ನು ನೋಡಿದಾಗ, ಸರ್ಕಾರದ ಪೂರ್ವಸಿದ್ಧತೆಯ ಕೊರತೆ ಕಂಡುಬರುತ್ತಿದೆ. ದೇಶದಲ್ಲಿ 45 ವರ್ಷ ಮೇಲ್ಪಟ್ಟವರ ಸಂಖ್ಯೆ ಸುಮಾರು 30 ಕೋಟಿ ಎಂದು ಅಂದಾಜಿಸಿದರೆ, ಎರಡೂ ಡೋಸ್‌ಗಳಿಗೆ 60 ಕೋಟಿ ಡೋಸ್‌ ಲಸಿಕೆ ಅಗತ್ಯವಿದೆ. 18ರಿಂದ 45 ವರ್ಷದವರು ಸುಮಾರು 55 ಕೋಟಿ ಎಂಬ ಅಂದಾಜಿನಂತೆ, ಸುಮಾರು 110 ಕೋಟಿ ಡೋಸ್‌ ಲಸಿಕೆ ಬೇಕಾಗಿದೆ. ಅಂದರೆ ಈ ಎರಡೂ ವರ್ಗಗಳಿಗೆ ಒಟ್ಟು 170 ಕೋಟಿ ಡೋಸ್‌ ಲಸಿಕೆಯ ಅಗತ್ಯವಿದೆ. ಇದರಲ್ಲಿ ಶೇ 60-70ರಷ್ಟು ಜನರನ್ನು ತಲುಪಬೇಕಾದರೂ ಸುಮಾರು 100ರಿಂದ 110 ಕೋಟಿ ಡೋಸ್‌ಗಳಷ್ಟು ಲಸಿಕೆ ಬೇಕಾಗುತ್ತದೆ. ಇಷ್ಟು ಪ್ರಮಾಣದ ಲಸಿಕೆ ಭಾರತದಲ್ಲಿ ಉತ್ಪಾದನೆಯಾಗುತ್ತಿಲ್ಲ.

ಪರಿಸ್ಥಿತಿ ಹೀಗಿರುವಾಗ, 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಸುಸೂತ್ರವಾಗಿ ಮುಗಿಸಿ, ನಂತರ 18-45 ವರ್ಷದವರಿಗೆ ಲಸಿಕೆ ನೀಡುವ ಬಗ್ಗೆ ಘೋಷಣೆ ಮಾಡಬೇಕಾಗಿತ್ತು. ಈಗ 18-45 ವರ್ಷದವರಿಗೆ ಲಸಿಕೆಗಾಗಿ ನೋಂದಣಿ ಪ್ರಾರಂಭವಾಗಿದೆ. ಇದಕ್ಕಾಗಿ ಕೋವಿನ್ ಆ್ಯಪ್‌ನಲ್ಲಿ ಮಾತ್ರ ನೋಂದಾಯಿಸಲು ಸೂಚಿಸಲಾಗಿದೆ. ಮೊದಲು ನೋಂದಾಯಿಸುವವರಿಗೆ ಮೊದಲ ಆದ್ಯತೆ ಎಂದು ತಿಳಿಸಿದರೆ, ಅವಿದ್ಯಾವಂತರು, ಸಮಾಜದ ಕೆಳವರ್ಗದ ಜನರ ಪಾಡೇನು? ಈ ಜನರಿಗೆ ನೋಂದಣಿ ಬಗ್ಗೆ ಮಾರ್ಗದರ್ಶನ ನೀಡುವ ಸಹಾಯ ಕೇಂದ್ರಗಳನ್ನಾದರೂ ಸರ್ಕಾರ ತೆರೆಯಬೇಕು. ಎರಡನೇ ಡೋಸ್ ಲಸಿಕೆ ಪಡೆಯುವಲ್ಲಿ ಹಿರಿಯ ನಾಗರಿಕರ ಆತಂಕ ದೂರ ಮಾಡಲು ತಕ್ಷಣವೇ ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು.

ಡಾ. ಟಿ.ಜಯರಾಂ,ಕೋಲಾರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.