ADVERTISEMENT

ವಾಚಕರ ವಾಣಿ: ಜೀವಕಂಠಕ ಆಗದಿರಲಿ ಹೆದ್ದಾರಿ

​ಪ್ರಜಾವಾಣಿ ವಾರ್ತೆ
Published 12 ಮೇ 2022, 22:00 IST
Last Updated 12 ಮೇ 2022, 22:00 IST

ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಬೈಕ್– ಕಾರು ನಡುವೆ ಅಪಘಾತವಾಗಿ ಇಬ್ಬರು ಮೃತರಾಗಿರುವುದಾಗಿ ವರದಿಯಾಗಿದೆ. ಈ ಹೆದ್ದಾರಿಯಲ್ಲಿ ಕೆಲ ದಿನಗಳಿಂದ ಒಂದರ ಮೇಲೊಂದರಂತೆ ಅಪಘಾತಗಳು ಸಂಭವಿಸುತ್ತಲೇ ಇರುವುದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ.

ಈ ರಸ್ತೆ ಉನ್ನತೀಕರಣವಾಗುವ ಮೊದಲು ಕೂಡ ಅಪಘಾತಗಳು ಆಗುತ್ತಿದ್ದವಾದರೂ ರಾಷ್ಟ್ರೀಯ ಹೆದ್ದಾರಿಯಾದ ಮೇಲೆ ಅವುಗಳ ಸಂಖ್ಯೆ ಕಡಿಮೆಯಾಗಬೇಕಿತ್ತು. ದುರದೃಷ್ಟವಶಾತ್ ಹಾಗಾಗಿಲ್ಲ. ಇದಕ್ಕೆ ವಾಹನಗಳ ಅತಿಯಾದ ವೇಗವೂ ಕಾರಣವಿರಬಹುದು. ಆದರೆ ಅಪಘಾತಗಳನ್ನು ತಡೆಗಟ್ಟಲು ಹೆದ್ದಾರಿ ಪ್ರಾಧಿಕಾರ ಸೂಕ್ತ ಕ್ರಮ ವಹಿಸದಿರುವುದು ಪ್ರಮುಖ ಕಾರಣಗಳಲ್ಲಿ ಸೇರಿದೆ.

ನಂಜನಗೂಡಿನಿಂದ ಗುಂಡ್ಲುಪೇಟೆವರೆಗಿನ ಸರಳರೇಖೆಯ ಈ ಹೆದ್ದಾರಿಯ ಉದ್ದಕ್ಕೂ ಎಡ-ಬಲಗಳಲ್ಲಿ ಹಲವಾರು ಹಳ್ಳಿಗಳ ಸಂಪರ್ಕ ರಸ್ತೆಗಳಿವೆ. ಇಲ್ಲಿ ಸೂಕ್ತ ಸಂಚಾರ ನಿಯಮ ಫಲಕಗಳನ್ನು ಹಾಕಬೇಕು. ಬೇಗೂರು ಗ್ರಾಮವು ಆ ಭಾಗದ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದು, ಹೆದ್ದಾರಿಯು ಈ ಪಟ್ಟಣದ ಮುಖ್ಯ ವಾಣಿಜ್ಯ ರಸ್ತೆಯೂ ಆಗಿರುವುದು ಸದಾ ಅಪಘಾತಕ್ಕೆ ತೆರೆದಂತಿದೆ. ಇಲ್ಲಿ ಸೂಕ್ತ ಪಾದಚಾರಿ ದಾಟು ರಸ್ತೆ ಮಾಡಬೇಕು. ಎಲ್ಲೆಂದರಲ್ಲಿ ರಸ್ತೆ ದಾಟದಂತೆ ಬ್ಯಾರಿಕೇಡ್ ಹಾಕಬೇಕು.

ADVERTISEMENT

ಇನ್ನು ನಂಜನಗೂಡಿನಿಂದ 4 ಕಿ.ಮೀ.ವರೆಗಿನ ಕಳಲೆ ಗೇಟ್‌ವರೆಗೆ ಮಾತ್ರ ರಸ್ತೆ ಚತುಷ್ಪಥವಾಗಿದೆ (ಕಳಲೆ ಕೇಶವಮೂರ್ತಿ ಅವರು ಶಾಸಕರಾಗಿದ್ದಾಗ ತಮ್ಮ ಹುಟ್ಟೂರಿನವರೆಗೆ ಮಾತ್ರ ಅನುಕೂಲ ಮಾಡಿಕೊಂಡರು). ಆದರೆ ಇದೇ ರಸ್ತೆ ಕಳಲೆಯಿಂದ ಮುಂದಕ್ಕೆ ಹೆಚ್ಚು ಅಗಲವಾಗದೆ ದ್ವಿಪಥ ರಸ್ತೆಯಾಗಿದೆ. ಆದ್ದರಿಂದ ಕಳಲೆಯಿಂದ ಮುಂದಕ್ಕೂ ರಸ್ತೆಯನ್ನು ಇನ್ನಷ್ಟು ಅಗಲ ಮಾಡಿ, ಮಧ್ಯದಲ್ಲಿ ತಡೆಗೋಡೆ ನಿರ್ಮಿಸಿ. ಅಪಘಾತಗಳಿಂದ ಆಗುವ ಜೀವಹಾನಿ ತಪ್ಪಿಸಿ.

ಮುಳ್ಳೂರು ಪ್ರಕಾಶ್,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.