ADVERTISEMENT

ವಾಚಕರ ವಾಣಿ| ಕಾರ್ಮಿಕರ ಪಿಂಚಣಿಗಿಂತ ವೃದ್ಧಾಪ್ಯ ವೇತನದ ಮೊತ್ತವೇ ಹೆಚ್ಚು!

​ಪ್ರಜಾವಾಣಿ ವಾರ್ತೆ
Published 23 ಮೇ 2020, 2:05 IST
Last Updated 23 ಮೇ 2020, 2:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸಂಘಟಿತ ವಲಯ ಎಂದೇ ಗುರುತಿಸಲಾಗುವ ಕೈಗಾರಿಕೆಗಳ ಕಾರ್ಮಿಕರಿಗೆ ಪಿಂಚಣಿ ಇಲ್ಲದಿರುವುದು ದುರದೃಷ್ಟಕರ. ಭವಿಷ್ಯನಿಧಿಯ ಸದಸ್ಯರಾಗಿದ್ದವರಿಗೆ 1971ರಿಂದ 1995ರವರೆಗೆ ಕುಟುಂಬ ಪಿಂಚಣಿಗೆ ಅವರವರ ವೇತನದ ಶೇ 1.16ರಷ್ಟು ವಂತಿಗೆ ಕಡ್ಡಾಯವಾಗಿತ್ತು. ಕಾರ್ಮಿಕರೇನಾದರೂ ಸೇವಾವಧಿಯಲ್ಲೇ ನಿಧನರಾದರೆ, ಅವರ ಕುಟುಂಬಕ್ಕೆ ಪಿಂಚಣಿ ಕೊಡಲಾಗುತ್ತಿತ್ತು. ವಿಷಾದದ ಸಂಗತಿಯೆಂದರೆ, 1995ರಲ್ಲಿ ಇದನ್ನು ‘ಕಾರ್ಮಿಕ ಪಿಂಚಣಿ’ಯಾಗಿ ಪರಿವರ್ತಿಸಲಾಯಿತು. ಭವಿಷ್ಯನಿಧಿ ವಂತಿಗೆಯಲ್ಲಿ ಕಾರ್ಮಿಕರ ವೇತನದಿಂದ ಶೇ 8.33ರಷ್ಟು ಹಣವನ್ನು ಮತ್ತು ಮಾಲೀಕರ ಕಡೆಯಿಂದಲೂ ಇಷ್ಟೇ ಮೊತ್ತವನ್ನು ವರ್ಗಾಯಿಸಿ ಪಿಂಚಣಿ ನಿಧಿಗೆ ನೀಡಲಾಗುತ್ತಿತ್ತು. ಈ ಮೊತ್ತವನ್ನು ಕಾರ್ಮಿಕರ ಹೆಸರಿನಲ್ಲಿ ನಿಶ್ಚಿತಾವಧಿ ಠೇವಣಿಯಾಗಿ ಇಟ್ಟಿದ್ದರೆ, ಈಗ ಬರುತ್ತಿರುವ ಪಿಂಚಣಿಗಿಂತ ಹೆಚ್ಚು ಹಣ ಬರುತ್ತಿತ್ತು. ಆದರೆ ಈಗ, 2014ಕ್ಕಿಂತ ಮುನ್ನ ನಿವೃತ್ತರಾದವರಿಗೆ ಬರುವುದು ಗರಿಷ್ಠ ₹ 2,200 ಮಾಸಿಕ ಪಿಂಚಣಿ ಮಾತ್ರ. ಈ ಕಾಲಘಟ್ಟದಲ್ಲಿ ಇಷ್ಟು ಅಲ್ಪಮೊತ್ತದಿಂದ ಜೀವನ ನಿರ್ವಹಣೆ ಸಾಧ್ಯವೇ? ಕೆಲವು ರಾಜ್ಯಗಳಲ್ಲಿ ನೀಡುತ್ತಿರುವ ವೃದ್ಧಾಪ್ಯ ವೇತನವೇ ಈ ಇಪಿಎಸ್ ಪಿಂಚಣಿಗಿಂತ ಹೆಚ್ಚಾಗಿರುವುದು ಚೋದ್ಯದ ಸಂಗತಿ!

ನಿವೃತ್ತ ಕಾರ್ಮಿಕರೆಲ್ಲರೂ ತಮ್ಮ ಸೇವಾವಧಿಯಲ್ಲಿ ನಿಸ್ಪೃಹವಾಗಿ ಆದಾಯ ತೆರಿಗೆಯನ್ನು ಸಲ್ಲಿಸಿ
ರುತ್ತಾರೆ. ಆದರೆ, ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಪಾಶ್ಚಾತ್ಯ ದೇಶಗಳಲ್ಲಿರುವಂತೆ ನಮ್ಮಲ್ಲಿ ಉತ್ತಮ ಸೌಲಭ್ಯಗಳು ಇಲ್ಲ. ಉದಾಹರಣೆಗೆ, ಅಮೆರಿಕದಲ್ಲಿ ಸಂಗ್ರಹವಾಗುವ ತೆರಿಗೆ ಮೊತ್ತದಲ್ಲಿ ಒಂದು ನಿರ್ದಿಷ್ಟ ಭಾಗವನ್ನು ಸಾಮಾಜಿಕ ಭದ್ರತೆಗೆಂದೇ ಎತ್ತಿಡಲಾಗುತ್ತದೆ. ಕನಿಷ್ಠ ಹತ್ತು ವರ್ಷ ಸೇವೆ ಸಲ್ಲಿಸಿದ್ದರೆ ಈ ಮೊತ್ತವನ್ನು ಆ ವ್ಯಕ್ತಿಯು ತನಗೆ 62 ವರ್ಷಗಳಾದ ಬಳಿಕ ಕ್ಲೈಮ್ ಮಾಡಿಕೊಳ್ಳಬಹುದು. ಎಲ್ಲದರಲ್ಲೂ ಅಮೆರಿಕವನ್ನು ಅನುಸರಿಸುವ ನಮ್ಮ ಸರ್ಕಾರಗಳಿಗೆ ಈ ವಿಚಾರ ಕಾಣುತ್ತಿಲ್ಲವೇಕೆ? ನಮ್ಮ ಸರ್ಕಾರಗಳು ಇನ್ನಾದರೂ ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಿ, ನಮ್ಮಂತಹವರ ನಿವೃತ್ತ ಜೀವನದಲ್ಲಿ ಒಂದಿಷ್ಟಾದರೂ ನೆಮ್ಮದಿ ಮೂಡಿಸಲಿ.
-ರಾ.ನಂ.ಚಂದ್ರಶೇಖರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT