ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ವರ್ಷಕ್ಕೊಮ್ಮೆ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸುಮಾರು ₹30 ಕೋಟಿಗೂ ಹೆಚ್ಚು ಖರ್ಚಾಗುತ್ತಿದೆ. ಇದರ ಬದಲು ನಾಲ್ಕು ವರ್ಷಕ್ಕೊಮ್ಮೆ ನುಡಿಜಾತ್ರೆ ಹಮ್ಮಿಕೊಳ್ಳುವುದು ಉತ್ತಮ. ಆಗ ಸಮ್ಮೇಳನಕ್ಕೂ ವಿಶೇಷ ಮೆರುಗು ಸಿಗಲಿದೆ. ಸಮ್ಮೇಳನ ಮುಗಿದು ತಿಂಗಳುಗಳು ಕಳೆದರೂ ಅದರ ಲೆಕ್ಕಪತ್ರ ಬಹಿರಂಗವಾಗುವುದೇ ಇಲ್ಲ. ಹಾಗಾಗಿ, ಪ್ರತಿ ವರ್ಷ ಸಮ್ಮೇಳನಕ್ಕೆ ಖರ್ಚು ಮಾಡುವ ಹಣವನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಬಳಸಬಹುದು. ಈ ಬಗ್ಗೆ ಸಮ್ಮೇಳನದ ಆಯೋಜಕರು ಮತ್ತು ರಾಜ್ಯ ಸರ್ಕಾರ ಚಿಂತನೆ ನಡೆಸಬೇಕಿದೆ.
-ಗಿರಿಯಪ್ಪ ಕೊಳ್ಳಣ್ಣವರ, ತುಮಕೂರು
ಯುವ‘ರಂಗ’: ಯಾವಾಗ ಸಂಕ್ರಮಣ? ಲೇಖನವು (ಮಂಡ್ಯ ರಮೇಶ್, ಪ್ರ.ವಾ., ಜುಲೈ 11) ಸಮಾಯೋಚಿತವೂ ಸಮರ್ಪಕವೂ ಆಗಿದೆ. ಇಂದಿನ ಯುವ ಜನಾಂಗವನ್ನು ಅಡ್ಡದಾರಿಗೆಳೆದು ಅವರ ಜೀವನವನ್ನೇ ಹಾಳು ಮಾಡುತ್ತಿರುವ ಸಿನಿಮಾ ಸಂಸ್ಕೃತಿಯ ಆಕ್ರಮಣದ ಭರಾಟೆಯ ಸಮಯದಲ್ಲಿ ರಂಗಭೂಮಿ ಅವರಲ್ಲಿ ಉತ್ತಮ ವ್ಯಕ್ತಿತ್ವವನ್ನು ಯಾವ ರೀತಿ ನಿರ್ಮಿಸಬಲ್ಲದು ಎಂಬ ಮಾತುಗಳನ್ನು ಹೇಳಿರುವ ಬಗೆ ಹೃದಯಸ್ಪರ್ಶಿಯಾಗಿದೆ. ಲೇಖಕರು ಹೇಳಿದಂತೆ ‘ನಮ್ಮ ಇಂದಿನ ಶಿಕ್ಷಣ ಕ್ರಮದಲ್ಲಿ ರಂಗಭೂಮಿ ಒಂದು ಅಧ್ಯಯನದ ವಿಷಯವಾಗಬೇಕು’ ಎಂಬ ವಿಚಾರ ತುಂಬಾ ಅಗತ್ಯ ಎನಿಸುತ್ತದೆ.
-ಮಾಲತಿ ಪಟ್ಟಣಶೆಟ್ಟಿ, ಧಾರವಾಡ
ಬೆಂಗಳೂರು ನಗರದಲ್ಲಿರುವ ಬೀದಿ ನಾಯಿಗಳಿಗೆ ಪೌಷ್ಟಿಕ ಆಹಾರ ನೀಡಲು ಬಿಬಿಎಂಪಿ ಮುಂದಾಗಿರುವುದು ಒಳ್ಳೆಯ ಕ್ರಮ (ಪ್ರ.ವಾ., ಜುಲೈ 11). ಸರ್ಕಾರದ ಯಾವುದೇ ಯೋಜನೆಗಳ ಅನುಷ್ಠಾನದಲ್ಲಿ ಭ್ರಷ್ಟಾಚಾರ ಇಣುಕುವುದು ಸರ್ವೇ ಸಾಮಾನ್ಯ. ಈ ಯೋಜನೆಯ ಜಾರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಭ್ರಷ್ಟಾಚಾರ ಎಸಗದಂತೆ ಎಚ್ಚರಿಕೆವಹಿಸಬೇಕಿದೆ. ನಾಯಿಗಳಿಗೆ ಆಹಾರ ಪೂರೈಸುವ ಸಿಬ್ಬಂದಿಯೂ ಮಾನವೀಯತೆ ಮೆರೆಯಬೇಕಿದೆ.
-ಎಂ.ಎ. ಸುರೇಶ್, ಬೆಂಗಳೂರು
ಮಂಡ್ಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯೊಂದಕ್ಕೆ ವೈಯಕ್ತಿಕ ಸಾಲದ ಬಗ್ಗೆ ಮಾಹಿತಿ ಪಡೆಯಲು ತೆರಳಿದ್ದೆ. ಸಾಲ ಮಂಜೂರಾತಿಗಾಗಿ, ನೀವು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮುಖ್ಯಸ್ಥರಿಂದ ಅಧಿಕಾರ ಪತ್ರ ಹಾಗೂ ಪತ್ನಿಯ ಸಾಲಕ್ಕೆ ಪತಿಯು ಸಹ ಅರ್ಜಿದಾರರಾಗಿ ಸಹಿ ಮಾಡಬೇಕಾಗುತ್ತದೆ ಎಂದು ಹೇಳಿದ ಬ್ಯಾಂಕ್‌ನ ಮ್ಯಾನೇಜರ್, ಅದಕ್ಕೆ ಸಂಬಂಧಿಸಿದ ಸುತ್ತೋಲೆ ತೋರಿಸಿದರು. ಸರ್ಕಾರಿ ನೌಕರರು ಗೃಹಕೃತ್ಯದ ತುರ್ತಿಗಾಗಿ ವೈಯಕ್ತಿಕ ಸಾಲ ಪಡೆಯುವುದು ಅನಿವಾರ್ಯ. ಆದರೆ, ಸಾಲ ಮಂಜೂರಾತಿಗೆ ಬ್ಯಾಂಕ್‌ಗಳು ಈ ರೀತಿಯ ನಿಯಮ ವಿಧಿಸಿದಾಗ ಅನೇಕರಿಗೆ ದಾಖಲೆ ಒದಗಿಸುವುದು ಕಷ್ಟವಾಗಿ, ಸುಲಭವಾಗಿ ಸಾಲ ನೀಡುವ ಆ್ಯಪ್‌ಗಳ ಮೊರೆ ಹೋಗಿ ಸಾಲದ ಸುಳಿಗೆ ಸಿಲುಕುತ್ತಾರೆ. ಕೃಷಿ ಸಾಲ ನೀಡಲು ರೈತರನ್ನು ಅಲೆದಾಡಿಸುವ ಬ್ಯಾಂಕ್‌ಗಳು, ಸರ್ಕಾರಿ ನೌಕರರಿಗೆ ವೈಯಕ್ತಿಕ ಸಾಲ ನೀಡಲು ಅನಗತ್ಯ ಷರತ್ತು ವಿಧಿಸುವುದನ್ನು ನೋಡಿದಾಗಲೂ ಬೇಸರವಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಇದಕ್ಕೊಂದು ಪರಿಹಾರ ರೂಪಿಸಬೇಕು.
-ಅನಸೂಯ ವಿ., ಮಂಡ್ಯ
ಸರ್ಕಾರದ ವಿವಿಧ ಇಲಾಖೆಯ ಮೂಲಕ ಪ್ರತಿವರ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಆರ್ಥಿಕ ದೃಷ್ಟಿಯಿಂದ ಇದು ಒಳ್ಳೆಯದು. ಈ ಸೌಲಭ್ಯ ಪಡೆಯಲು ಕೆಲವು ಮಾನದಂಡ ನಿಗದಿ
ಪಡಿಸಲಾಗಿದೆ. ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸುವ ವೇಳೆ ಏನಾದರೂ ಲೋಪದೋಷಗಳಾದರೆ, ಆ ನಂತರ ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ಒಮ್ಮೆ ಸಲ್ಲಿಸಿದ ಅರ್ಜಿಯನ್ನೇ ಅಂತಿಮವೆಂದು ಪರಿಗಣಿಸಲಾಗುತ್ತದೆ. ಅರ್ಜಿಯಲ್ಲಿ ತಪ್ಪುಗಳಿದ್ದರೆ ತಿರಸ್ಕರಿಸಲಾಗುತ್ತಿದೆ. ಈ ಕುರಿತು ಸಂಬಂಧಿಸಿದ ಇಲಾಖೆಯ ಸಹಾಯವಾಣಿಗೆ ಸಂಪರ್ಕಿಸಿದರೂ ಪ್ರಯೋಜನವಾಗುತ್ತಿಲ್ಲ. ಅರ್ಜಿಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಲು ಸರ್ಕಾರ ಕ್ರಮವಹಿಸಬೇಕಿದೆ.⇒
-ರಾಕೇಶ ಆಲಬಾಳ, ಅಥಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.