ADVERTISEMENT

ಗ್ರಂಥಾಲಯ ಕರ: ದುರುಪಯೋಗ ಬೇಡ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 19:30 IST
Last Updated 21 ಜನವರಿ 2021, 19:30 IST

ಸರ್ಕಾರ ಸಂಗ್ರಹಿಸುತ್ತಿರುವ ಗ್ರಂಥಾಲಯ ಕರವನ್ನು ಸ್ಥಳೀಯ ಸಂಸ್ಥೆಗಳು ತಮಗೆ ಬೇಕಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿವೆ ಎಂಬ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಹೇಳಿಕೆ (ಪ್ರ.ವಾ., ಜ. 7) ಸರಿಯಾಗಿದೆ.

ಇಂದು ಹಳ್ಳಿಗಳು ಗ್ರಂಥಾಲಯದ ಕೊರತೆಯಿಂದ ಬಳಲುತ್ತಿವೆ. ಗ್ರಂಥಾಲಯಕ್ಕಾಗಿಯೇ ಸರ್ಕಾರವು ಕರ ಸಂಗ್ರಹಿಸುತ್ತಿರುವಾಗ ಅದನ್ನು ಪುಸ್ತಕ ಕೊಳ್ಳಲು ಮತ್ತು ಹಳ್ಳಿಗಳಲ್ಲಿ ಗ್ರಂಥಾಲಯಗಳನ್ನು ಸುಸ್ಥಿತಿಯಲ್ಲಿಡಲು ಉಪಯೋಗಿಸದೆ ಬೇರೆ ಯೋಜನೆಗಳಿಗೆ ವ್ಯಯಿಸುವುದು ಎಷ್ಟು ಸರಿ?

ಊರಿಗೆ ರಸ್ತೆ ಎಷ್ಟು ಮುಖ್ಯವೋ ಗ್ರಂಥಾಲಯವೂ ಅಷ್ಟೇ ಮುಖ್ಯ. ಈ ಸದುದ್ದೇಶದಿಂದಲೇ ಸರ್ಕಾರವು ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನು ಸ್ಥಾಪಿಸಿದೆ. ಪುಸ್ತಕಗಳನ್ನು ಖರೀದಿಸಲು ಪಂಚಾಯಿತಿಗಳು, ಪುರಸಭೆಗಳು, ಪಾಲಿಕೆಗಳು ನಿಗದಿತ ಹಣವನ್ನು ವಿನಿಯೋಗಿಸಬೇಕು. ತಮ್ಮ ಕ್ಷೇತ್ರಕ್ಕೆ ಅದು ಬೇಕು ಇದು ಬೇಕು ಎಂದು ಬೇಡಿಕೆ ಮಂಡಿಸಿ ಸರ್ಕಾರವನ್ನು ಒತ್ತಾಯಿಸುವ ಶಾಸಕರು, ತಮ್ಮ ಕ್ಷೇತ್ರದ ಫಲಾನುಭವಿಗಳಿಗಾಗಿ ಹಳ್ಳಿಗಳಲ್ಲಿ ಗ್ರಂಥಾಲಯ ಸ್ಥಾಪಿಸಿ, ಪುಸ್ತಕಗಳನ್ನು ಖರೀದಿಸಲು ಹಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ ನಿದರ್ಶನವನ್ನೇ ನಾನು ಕಂಡಿಲ್ಲ. ಜಾತಿ, ಸಮುದಾಯಗಳ ಓಲೈಕೆಗೆ ದಿಢೀರ್ ಎಂದು ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡುವ ಸರ್ಕಾರವು ಜ್ಞಾನ ಭಂಡಾರವಾದ ಗ್ರಂಥಾಲಯ ಇಲಾಖೆಯ ಬಗ್ಗೆ ಏಕಿಷ್ಟು ನಿರಾಸಕ್ತಿ ತೋರಿಸುತ್ತಿದೆಯೋ ತಿಳಿಯದು.

ADVERTISEMENT

ಸತ್ಯಬೋಧ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.