ADVERTISEMENT

ಬೇಕಾಗಿದ್ದಾನೆ ಜಗದ ಜಲಗಾರ...

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 20:00 IST
Last Updated 3 ಜನವರಿ 2020, 20:00 IST

ದಲಿತರ ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ಪೇಜಾವರ ಶ್ರೀಗಳು 2009ರಲ್ಲಿ ಚಳ್ಳಕೆರೆ ತಾಲ್ಲೂಕಿನ ಸೂರನಹಳ್ಳಿಗೆ ಬಂದಿದ್ದ ಸಂಗತಿಯನ್ನು ಜಡೇಕುಂಟೆ ಮಂಜುನಾಥ್‌ ವಿವರಿಸಿದ್ದಾರೆ. (ವಾ.ವಾ., ಡಿ. 31). ಡಿಎಸ್ಎಸ್ ನಾಯಕ ಶ್ರೀನಿವಾಸ್‌ ಅವರು ಪೇಜಾವರ ಶ್ರೀಗಳನ್ನುಕರೆತಂದರೂ ಅಲ್ಲಿ ದಲಿತರಿಗೆ ದೇವಾಲಯ ಪ್ರವೇಶಕ್ಕೆ ವ್ಯವಸ್ಥೆ ಮಾಡಲು ಆಗದೇ ಹೋದದ್ದು, ದಲಿತ ಮುಖಂಡರೇ ಕೊನೆಗೆ ‘ನಮಗೆ ದೇವಾಲಯ ಪ್ರವೇಶ ಬೇಡ, ನಾವೆಲ್ಲಾ ಸಾಮರಸ್ಯದಿಂದ ಬದುಕುತ್ತಿದ್ದೇವೆ’ ಎಂದು ಹೇಳಿದ ಮೇಲೆ ಶ್ರೀಗಳು ಮರಳಿದ್ದನ್ನು ವಿವರಿಸಿದ್ದಾರೆ.

ಇದು, ಚರಿತ್ರೆಯ ಉದ್ದಕ್ಕೂ ನಡೆದು ಬಂದಿದೆ. ಯು.ಆರ್. ಅನಂತಮೂರ್ತಿ ಅವರು ‘ಭಾರತೀಪುರ’ ಹಾಗೂ ಎಸ್.ಎಲ್. ಭೈರಪ್ಪನವರು ‘ದಾಟು’ ಕಾದಂಬರಿಗಳಲ್ಲಿ ದಲಿತರನ್ನು ದೇವಾಲಯ ಪ್ರವೇಶಕ್ಕೆ ಅಣಿಗೊಳಿಸಿ ವಿಫಲರಾದದ್ದುಂಟು. ಆದರೆ ದಲಿತರಿಗೆ ಬೇಕಾಗಿರು
ವುದು ದೇವಾಲಯ ಪ್ರವೇಶವಲ್ಲ, ಅವರಿಗೆ ಬೇಕಾಗಿರುವುದು ಅನ್ನ, ಬಟ್ಟೆ, ಸೂರು, ವಿದ್ಯೆ, ಉದ್ಯೋಗ.

ಕುವೆಂಪು ತಮ್ಮ ‘ಜಲಗಾರ’ ನಾಟಕದಲ್ಲಿ, ರಸ್ತೆಯಲ್ಲಿ ಕಸ ಗುಡಿಸುವ ವ್ಯಕ್ತಿಯ ಬಾಯಲ್ಲಿ ‘ನನಗೆ ಸ್ಥಾವರ ದೇವಾಲಯ ಪ್ರವೇಶ ಬೇಡ, ನಾನೊಬ್ಬ ಜಗದ ಜಲಗಾರ. ನನಗೆ ಈ ನಿಸರ್ಗವೇ ದೇವಾಲಯ’ ಎಂದು ಹೇಳಿಸಿದ್ದಾರೆ. ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯ ವಿಶ್ವಮಾನವ ತತ್ವಗಳ ಆಚರಣೆ ಇಂದಿನ ಬದುಕಿಗೆ ಅಗತ್ಯ.

ADVERTISEMENT

-ಲಿಂಗಯ್ಯ ಆರ್‌.ಎಸ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.