ADVERTISEMENT

ಇತಿಮಿತಿಗಳು ನಿತ್ಯಜೀವನದ ಸೂತ್ರಗಳಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ಮೇ 2020, 20:15 IST
Last Updated 28 ಮೇ 2020, 20:15 IST

ಕೊರೊನಾ ವೈರಾಣುವಿನ ಕಾರಣದಿಂದ ನಮ್ಮ ಸಾಮಾಜಿಕ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳ ಜೊತೆಗೆ ಸಕಾರಾತ್ಮಕ ಪರಿಣಾಮಗಳೂ ಆಗಿವೆ. ಸ್ವಾವಲಂಬಿಗಳಾಗಿ, ಶುದ್ಧ ಪರಿಸರ ನಿರ್ಮಿಸಿಕೊಂಡು ಬದುಕುವ ಹವ್ಯಾಸವನ್ನು ಈ ಸಂದರ್ಭ ನಮಗೆ ಕಲಿಸಿದೆ. ಅದರಲ್ಲೂ ನಗರ ಜೀವನದಲ್ಲಿ ಹೆಚ್ಚು ವ್ಯತ್ಯಾಸಗಳಾಗಿವೆ. ಲಾಕ್‌ಡೌನ್‌ನಿಂದ ಪುರುಷ– ಸ್ತ್ರೀ ಎಂಬ ಭೇದವಿಲ್ಲದೆ ಎಲ್ಲರೂ ಎಲ್ಲವನ್ನೂ ಮಾಡುವಂತಾಗಿದೆ.

ಮನೆಯಲ್ಲಿ ಮೂರು ಹೊತ್ತೂ ಊಟ ಸಿಗಬೇಕೆಂದರೆ ಸಹಬಾಳ್ವೆಯಿಂದಿರುವ ಗುಣವನ್ನು ಕಲಿಸಿದೆ. ಶುಚಿ ರುಚಿಯಾದ ಆರೋಗ್ಯಪೂರ್ಣ ಆಹಾರ ಸೇವನೆ ಅಭ್ಯಾಸವಾಗಿದೆ. ಸಾಮಾನ್ಯ ದಿನಗಳಲ್ಲಿ ಆಗುತ್ತಿದ್ದ ದುಂದುವೆಚ್ಚಗಳು ಕಡಿಮೆಯಾಗಿವೆ. ವಾರಾಂತ್ಯದ ಪ್ರವಾಸ, ಮೋಜು ಮಸ್ತಿಗೆ ಬ್ರೇಕ್‌ ಬಿದ್ದಿದೆ. ಎಲ್ಲೆಂದರಲ್ಲಿ ಯಾವಾಗ ಬೇಕಾದರೂ ವಾಹನ ಚಾಲನೆಗೆ ಆಗುತ್ತಿದ್ದ ಡೀಸೆಲ್‌, ಪೆಟ್ರೋಲ್‌ ಖರ್ಚು ಕಡಿತವಾಗಿದೆ. ಪರಿವಾರದ ಸದಸ್ಯರು ಒಟ್ಟಿಗೇ ಸೇರುವಂತಾಗಿದೆ.

ಮಕ್ಕಳ ಜೊತೆಗೆ ಮಕ್ಕಳಾಗಿಯೂ ಹಿರಿಯರ ಜೊತೆಗೆ ಗಂಭೀರವಾಗಿಯೂ (ರಾಮಾಯಣ, ಮಹಾಭಾರತ ಧಾರಾವಾಹಿಗಳ ಪ್ರಭಾವ), ಮರೆತುಹೋಗಿದ್ದ ಸಂಸ್ಕಾರಗಳನ್ನು, ನೆನಪುಗಳನ್ನು ಅವಲೋಕಿಸುವ ಅವಕಾಶ ಸಿಕ್ಕಿತು. ಹೀಗೆ ಒಂದಲ್ಲ, ಎರಡಲ್ಲ, ಮನುಷ್ಯನ ನಿತ್ಯಜೀವನದಲ್ಲಿ ಅನೇಕ ಇತಿಮಿತಿಗಳನ್ನು ಕೊರೊನಾ ಕಲಿಸಿದೆ. ಆದರೆ ಈ ಇತಿಮಿತಿಗಳು ಕೇವಲ ಈ ಸಮಯಕ್ಕಷ್ಟೇ ಸೀಮಿತವಾಗದೆ ನಿತ್ಯಜೀವನದ ಸೂತ್ರಗಳಾದರೆ, ಕುಟುಂಬಗಳು ಸದಾ ಆರೋಗ್ಯಪೂರ್ಣವಾಗಿ ಇರುತ್ತವೆ ಅಲ್ಲವೇ?

ADVERTISEMENT

ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ,ಶ್ರೀಕ್ಷೇತ್ರ ಹೊಂಬುಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.