ADVERTISEMENT

ಮಹಾ ಚುನಾವಣೆಯ ಮಹಾ ದುರಂತ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 11 ಏಪ್ರಿಲ್ 2019, 18:30 IST
Last Updated 11 ಏಪ್ರಿಲ್ 2019, 18:30 IST

‘ರಾಜ್ಯ ಸರ್ಕಾರ 33 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲು ಮುಂದಾಗಿದೆ, ಆದರೆ ಸರ್ಕಾರಕ್ಕೆ ನೀರಿನ ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇಲ್ಲ’ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ರಾಜ್ ಅವರು ಹೇಳಿರುವುದು (ಪ್ರ.ವಾ., ಏ. 9) ಬಹು ಮಹತ್ವದ ವಿಷಯ.ಯಾವ ರಾಷ್ಟ್ರೀಯ ಪಕ್ಷವೂ ನೀರಿನ ವಿಷಯವನ್ನು ಗಂಭೀರವಾಗಿ ಪರಿಗಣಿಸದಿರುವುದು ಮಹಾ ಚುನಾವಣೆಯ ಮಹಾ ದುರಂತ.

ನೀರು ಜೀವಾಮೃತ, ನೀರಿಲ್ಲದೆ ಬದುಕಿಲ್ಲ ಎಂಬುದನ್ನು ಪುನಃ ಪುನಃ ಹೇಳಬೇಕಾಗಿ ಬಂದಿದೆ. ನೀರಿನಿಂದಲೇ ನಾಗರಿಕತೆಯ ಅಳಿವು, ಉಳಿವು ಎಂಬುದನ್ನೇ ನಾವು ಮರೆಯಬೇಕೇ? ಸಾಮಾನ್ಯ ಜ್ಞಾನವೂ ನಮಗೆ ಇಲ್ಲವಾಯಿತೇ? ಕೊಳವೆ ಬಾವಿ ಕೊರೆದು ಭೂಮಿ ತಾಯಿಯ ಗರ್ಭವನ್ನೇ ಬರಿದು ಮಾಡಿದರೂ ತಿಳಿವಳಿಕೆ ಇಲ್ಲವಾಗಿದೆ. ಮುಂದಿನ ಪೀಳಿಗೆಗೆ ಕಂಟಕವಾಗಲಿರುವ ನೀರಿನ ಗಂಭೀರ ಸಮಸ್ಯೆಯನ್ನು ಕೂಲಂಕಷವಾಗಿ ಶಿಕ್ಷಣದಲ್ಲಿ ಅಳವಡಿಸುವುದರ ಜೊತೆಗೆ, ಈ ಬಗ್ಗೆ ಯುವಜನರಿಗೆ ಅರಿವು ಮೂಡಿಸದೇ ಇರುವುದು ಸರ್ಕಾರಗಳ ವೈಫಲ್ಯ. ಈಜುಕೊಳಗಳ ಬಗ್ಗೆ ಇರುವ ಅತೀವ ಆಸಕ್ತಿಯು ನೀರಿನ ಉಳಿತಾಯ ಹಾಗೂ ಅದರ ಸಮರ್ಪಕ ನಿರ್ವಹಣೆ ಬಗ್ಗೆ ಇಲ್ಲ. ಹಾಗೆಂದು ಏನೂ ಕೆಲಸವೇ ನಡೆಯುತ್ತಿಲ್ಲ ಎನ್ನಲಾಗದು.ಆದರೆ ಈ ನಿಟ್ಟಿನಲ್ಲಿ ಮಾಡುತ್ತಿರುವ ಕೆಲಸ ಏನೇನೂ ಸಾಲದು. ನೀರಿನ ಸಮಸ್ಯೆ ಪರಿಹಾರಕ್ಕೆ ಸಮರೋಪಾದಿಯಲ್ಲಿ ಕ್ರಮ ಕೈಗೊಂಡು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT